ನ್ಯೂಸ್ ನಾಟೌಟ್: ವಾಟ್ಸಾಪ್ ಭಾರತದಲ್ಲಿ ತುಂಬಾ ಜನಪ್ರಿಯವಾಗಿದ್ದು, ನಾಗರಿಕರ ಖಾಸಗಿತನದ ಹಕ್ಕು ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಠಿಯಿಂದ ವಾಟ್ಸಾಪ್ ವ್ಯವಹಾರಗಳು ಮತ್ತು ಮೆಸೆಜ್ ಗಳ ಮೇಲೆ ಸರ್ಕಾರ ನಿಗಾ ಇಡಲು ಬಯಸಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಕಾನೂನು ಸಮರ ನಡೆಸುತ್ತಿದೆ. ವಾಟ್ಸಾಪ್ ಎಂಡ್ ಟು ಎಂಡ್ ಎನ್ ಕ್ರಿಪ್ಶನ್ ತೆಗೆದುಹಾಕಬೇಕು ಎಂದು ಸೂಚಿಸಿದರೆ ಹಾಗಾಗಿ ಗ್ರಾಹಕರ ಗೌಪ್ಯತೆಯನ್ನು ಬಿಡಲಾಗುವುದಿಲ್ಲ ಹಾಗಾಗಿ ನಾವು ಭಾರತದಲ್ಲಿ ವಾಟ್ಸಾಪ್ ಸರ್ವಿಸ್ ಅನ್ನು ಸ್ಥಗಿತಗೊಳಿಸುವುದಾಗಿ ದೆಹಲಿ ಹೈಕೋರ್ಟ್ ಗೆ ಸಂಸ್ಥೆ ತಿಳಿಸಿದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮ 2021ರ ನಿಯಮವನ್ನು ಪ್ರಶ್ನಿಸಿ WhatsApp ಮತ್ತು ಮೆಟಾ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಈ ಹೇಳಿಕೆಯನ್ನು ನೀಡಿದೆ. ನಿಯಮ 4(2)ರ ಪ್ರಕಾರ, ಸಂದೇಶ ಸೇವೆಗಳನ್ನು ಒದಗಿಸುವ ಸಾಮಾಜಿಕ ಜಾಲತಾಣ ಕಂಪನಿಗಳು ಒಂದು ವೇಳೆ ನ್ಯಾಯಾಲಯ ಅಥವಾ ಸಕ್ಷಮ ಪ್ರಾಧಿಕಾರ ಆದೇಶ ನೀಡಿದಲ್ಲಿ ಯಾರು ಸಂದೇಶವನ್ನು ಕಳುಹಿಸಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಹೇಳುತ್ತದೆ. ಇದನ್ನು ವಾಟ್ಸಾಪ್ ಮತ್ತು ಮೆಟಾ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು.
ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ ಮಾಹಿತಿಯನ್ನು ನೀಡಬಹುದಾಗಿದೆ ಎಂದು ವಾಟ್ಸಾಪ್ ತಿಳಿಸಿದೆ. ಆದರೆ ಪೂರ್ಣಸ್ವರೂಪದ ಮೂಲ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ವಾಟ್ಸಾಪ್ ಮತ್ತು ಫೇಸ್ ಬುಕ್ ಬಳಕೆದಾರರ ಮಾಹಿತಿಯಿಂದ ಹಣಗಳಿಸುತ್ತಿದೆ. ಹೀಗಾಗಿ ಅದು ಗೌಪ್ಯತೆಯನ್ನು ರಕ್ಷಿಸುತ್ತದೆ ಎಂದು ಹೇಳಲು ಕಾನೂನುಬದ್ಧವಾಗಿ ಅರ್ಹತೆ ಹೊಂದಿಲ್ಲ. ಫೇಸ್ ಬುಕ್ ಮೇಲೆ ಹೆಚ್ಚಿನ ನಿಯಂತ್ರಣ ಹೇರುವ ಕಾರ್ಯ ವಿವಿಧ ದೇಶಗಳಲ್ಲಿ ನಡೆಯುತ್ತಿದೆ ಎಂದು ಕೇಂದ್ರ ವಾದ ಮಂಡಿಸಿದೆ. ಎನ್ ಕ್ರಿಪ್ಶನ್ ತೆಗೆದುಹಾಕದೇ ಸಂದೇಶದ ಮೂಲವನ್ನು ಕಂಡುಹಿಡಿಯಲು ಸಾಧ್ಯವಿಲ್ಲ ಎಂದಾದರೆ, ವಾಟ್ಸಾಪ್ ಇದಕ್ಕೆ ಪರ್ಯಾಯವಾದ ಕಾರ್ಯವಿಧಾನದ ಬಗ್ಗೆ ಪರಿಹಾರ ತಿಳಿಸಬೇಕು ಎಂದು ಕೇಂದ್ರ ಸರ್ಕಾರ ಈ ಮೊದಲು ವಾದ ಮಂಡಿಸಿದ ವೇಳೆ ತಿಳಿಸಿತ್ತು. ಪ್ರಕರಣದ ಕುರಿತು ವಾದ, ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ಆಗಸ್ಟ್ 14ಕ್ಕೆ ವಿಚಾರಣೆಯನ್ನು ಮುಂದೂಡಿದೆ ಎನ್ನಲಾಗಿದೆ.