ನ್ಯೂಸ್ ನಾಟೌಟ್: ಬೆಂಗಳೂರು ಮತ್ತು ಕರ್ನಾಟಕದ ಹಲವು ಜಿಲ್ಲೆಗಳು ಮಾತ್ರವಲ್ಲದೆ ಪ್ರಪಂಚದ ವಿವಿಧೆಡೆ ಅನೇಕ ನಗರಗಳು ಈ ಬಾರಿಯ ಬಿಸಿಲಿಗೆ ತೀವ್ರ ನೀರಿನ ಕೊರತೆ ಎದುರಿಸುತ್ತಿವೆ. ದಕ್ಷಿಣ ಅಮೆರಿಕದ ಕೊಲಂಬಿಯಾದ ಬೊಗೋಟಾ ನಗರವಂತೂ ಗಂಭೀರ ಸ್ಥಿತಿಯಲ್ಲಿದೆ ಎನ್ನಲಾಗಿದೆ. ಹಾಗಾಗಿ ನೀರು ಮಿತವ್ಯಯಕ್ಕೆ ಅಲ್ಲಿನ ಮೇಯರ್, ಜನರಿಗೆ ವಿಚಿತ್ರ ಕರೆ ನೀಡಿದ್ದಾರೆ.
“ಜನರು ಜೋಡಿಯಾಗಿ(ಸಂಗಾತಿ ಜತೆ) ಸ್ನಾನ ಮಾಡಬೇಕು’ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ನೀರು ಪೂರೈಕೆಯನ್ನು ತಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಬೊಗೋಟಾ ಮೇಯರ್ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ ಅವರು, “ಜೋಡಿಯಾಗಿ ಸ್ನಾನ ಮಾಡುವುದು ನೀರು ಮಿತವ್ಯಯ ಬಳಕೆಯ ಅಭ್ಯಾಸ ಎಂದು ಭಾವಿಸಿಕೊಳ್ಳಬೇಕು.
ಈ ರೀತಿಯಾಗಿ ಮಾಡುವುದರಿಂದ ನೀರು ಉಳಿಯಾತವಾಗಿ ಸಾಕಷ್ಟು ಸಹಾಯವಾಗಲಿದೆ’ ಎಂದು ಹೇಳಿದ್ದಾರೆ. ಜೋಡಿಯಾಗಿ ಸ್ನಾನ ಮಾಡಿ ಎಂದ ಕರೆ ನೀಡಿರುವ ಮೇಯರ್, ಒಂದೊಮ್ಮೆ ಮನೆಯಲ್ಲೇ ಇರುವುದಾದರೆ ಸ್ನಾನವನ್ನೇ ಮಾಡಬೇಡಿ ಎಂದೂ ಜನರಿಗೆ ಹೇಳಿದ್ದಾರೆ ಎನ್ನಲಾಗಿದೆ. “ರವಿವಾರ ಅಥವಾ ವಾರದ ಇನ್ನಾವುದೇ ನೀವು ಹೊರಗಡೆ ಎಲ್ಲಿಗೂ ಹೋಗುವುದಿಲ್ಲ ಎಂದಾದರೆ ದಯವಿಟ್ಟು ಸ್ನಾನ ಮಾಡಬೇಡಿ’ ಎಂದು ಹೇಳಿರುವುದು ಈಗ ಎಲ್ಲೆಡೆ ವೈರಲ್ ಆಗಿದೆ.