ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಬೇಕೆಂಬ ಉದ್ದೇಶದಿಂದ ಮತದಾನ ಮಾಡಿ ಬರುವ ಗ್ರಾಹಕರಿಗೆ ಉಚಿತ ಆಹಾರ ಒದಗಿಸುವ ಬೆಂಗಳೂರು ಹೋಟೆಲ್ ಸಂಘದ ನಿರ್ಧಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಉಚಿತ ಆಹಾರ ನೀಡುವುದಕ್ಕೆ ಬಿಬಿಎಂಪಿ ಆಕ್ಷೇಪಣೆ ಪ್ರಶ್ನಿಸಿ ಬೆಂಗಳೂರು ಹೋಟೆಲ್ ಸಂಘ ಮತ್ತು ನಿಸರ್ಗ ಗ್ರ್ಯಾಂಡ್ ಹೋಟೆಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಇಂದು(ಎ.೨೪) ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಸಂಘ ಯಾವುದೇ ರಾಜಕೀಯ ದುರುದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ.
ಮತದಾನದ ಉತ್ತೇಜನಕ್ಕೆ ನಾವು ಈ ಕಾರ್ಯ ಕೈಗೊಂಡಿದ್ದು, ಈ ಹಿಂದೆಯೂ ಮತದಾರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉಚಿತ ಆಹಾರ ವಿತರಣೆ ಮಾಡಿದ್ದೇವೆ. ಹಾಗಾಗಿ ನಮ್ಮ ನಿರ್ಧಾರಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಕೆಲಕಾಲ ವಾದ ಆಲಿಸಿದ ನ್ಯಾಯಪೀಠ ಅರ್ಜಿದಾರರ ಉತ್ತಮ ನಡೆಗೆ ಪ್ರಶಂಸೆ ವ್ಯಕ್ತಪಡಿಸಿತು. ಚುನಾವಣೆ ದಿನ ಮತದಾನ ಮಾಡಿ ಬಂದ ಗ್ರಾಹಕರಿಗೆ ಉಚಿತವಾಗಿ ಆಹಾರ ನೀಡಲು ಅವಕಾಶ ಕಲ್ಪಿಸಿ ಹೋಟೆಲ್ ಮಾಲೀಕರಿಗೆ ಹೈಕೋರ್ಟ್ ಅನುಮತಿ ನೀಡಿದೆ ಎಂದು ವರದಿ ತಿಳಿಸಿದೆ.