ನ್ಯೂಸ್ ನಾಟೌಟ್: ತಮಿಳು ಸೂಪರ್ ಸ್ಟಾರ್ ನಟ ವಿಜಯ್ ಇತ್ತೀಚೆಗೆ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷವನ್ನು ಘೋಷಣೆ ಮಾಡಿದ್ದು, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್ ರಾಜಕೀಯಕ್ಕೆ ಎಂಟ್ರಿಕೊಡಲು ಸಿದ್ಧರಾಗಿದ್ದು, ಹೀರೋ ವಿಶಾಲ್ ರಾಜಕೀಯಕ್ಕೆ ಎಂಟ್ರಿಕೊಡುವುದಾಗಿ ತಿಳಿಸಿದ್ದಾರೆ. ಯಾವುದೇ ಪಕ್ಷದಲ್ಲಿ ಸೇರದೇ ತಾವೇ ರಾಜಕೀಯ ಪಕ್ಷ ಸ್ಥಾಪಿಸುವುದಾಗಿಯೂ ಘೋಷಿಸಿದ್ದಾರೆ.
2026ರಲ್ಲಿ ತಮಿಳುನಾಡು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದು ತಿಳಿಸಿದ್ದಾರೆ. ಅಲ್ಲದೆ ಅತಿ ಶೀಘ್ರದಲ್ಲಿ ರಾಜಕೀಯ ಪ್ರವೇಶ ಮಾಡುವುದು ಖಚಿತ ಎಂದಿರುವ ವಿಶಾಲ್. ರಾಜಕೀಯ ಪ್ರವೇಶದ ಭಾಗವಾಗಿ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ರಾಜ್ಯದ ಜನತೆ ಸಮಸ್ಯೆ ಅಥವಾ ಸೂಕ್ತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಅವುಗಳನ್ನು ಪರಿಹರಿಸಲು ರಾಜಕೀಯ ಪ್ರವೇಶ ನಿಶ್ಚಿತ ಎಂದಿದ್ದಾರೆ. ಇನ್ನು ಯಾವುದಾದರೂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶಾಲ್, ಮೊದಲು ತನ್ನನ್ನು ತಾನು ಸಾಬೀತುಪಡಿಸಿಕೊಂಡ ನಂತರವೇ ಮೈತ್ರಿ ಮತ್ತಿತರ ವಿಚಾರಗಳ ಬಗ್ಗೆ ಯೋಚಿಸುತ್ತೇನೆ, ಆದರೆ, ಸದ್ಯಕ್ಕೆ ಅಂತಹ ಯೋಚನೆ ಇಲ್ಲ ಎಂದು ಹೇಳಿದರು.
ಸದ್ಯ ಅವರ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ದಳಪತಿ ವಿಜಯ್ ಕೂಡ ತಮ್ಮದೇ ಪಕ್ಷ ಕಟ್ಟಿಕೊಂಡು 2026ರ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಚಿತ್ರರಂಗದ ಗಣ್ಯರು ರಾಜಕೀಯಕ್ಕೆ ಎಂಟ್ರಿ ಕೊಡುವುದರಿಂದ ಯಾವ ಪಕ್ಷ ಗೆಲ್ಲುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಫೆಬ್ರವರಿಯಲ್ಲಿ ಪಕ್ಷ ಘೋಷಿಸಿದ್ದ ವಿಜಯ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರು. ಆದರೆ 2026ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ. ರಾಜಕೀಯ ಎಂಬುದು ಮನರಂಜನಾ ತಾಣವಲ್ಲ, ಅದೊಂದು ಸೇವೆ ಎಂದು ತಿಳಿಸಿದ್ದರು. ಇನ್ನು ತಮಿಳುನಾಡು ಸಿನಿಮಾ ನಟರಿಗೂ ರಾಜಕೀಯ ಹೊಸದೇನಲ್ಲ. ಎಂಜಿ ರಾಮಚಂದ್ರನ್, ಜಯಲಲಿತಾ, ಶಿವಾಜಿ ಗಣೇಶನ್, ಕಮಲ್ ಹಾಸನ್, ವಿಜಯಕಾಂತ್, ಶರತ್ ಕುಮಾರ್ ರಾಜಕೀಯದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಎಂಜಿಆರ್, ಜಯಲಲಿತಾ ಯಶಸ್ಸು ಸಾಧಿಸಿದರೆ, ವಿಜಯಕಾಂತ್ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದರು. ಉಳಿದವರು ನಿರೀಕ್ಷಿಸಿದಷ್ಟು ಯಶಸ್ಸು ಸಾಧಿಸಿಲ್ಲ. ಇದೀಗ ಸೂಪರ್ ಸ್ಟಾರ್ಗಳಾಗಿ ಗುರುತಿಸಿಕೊಂಡಿರುವ ನಾಯಕರು ರಾಜಕೀಯಕ್ಕೆ ಎಂಟ್ರಿಕೊಡುತ್ತಿದ್ದಾರೆ.