ನ್ಯೂಸ್ ನಾಟೌಟ್: ವಿಶ್ವ ಹಿಂದೂ ಪರಿಷದ್, ಬಜರಂಗದಳ ಸುಳ್ಯ ಆಶ್ರಯದಲ್ಲಿ ಹಾಗೂ ಅಭಿಜ್ಞಾ ಭಟ್ ನಾಟಿಕೇರಿ ಇವರ ಸಾರಥ್ಯದಲ್ಲಿ ಅವಿ ಮಕ್ಕಳ ಬೇಸಿಗೆ ಶಿಬಿರ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಆರಂಭಗೊಂಡಿದೆ.
ಕಾರ್ಯಕ್ರಮವನ್ನು ಶ್ರೀದೇವಿ ನಾಗರಾಜ್ ಭಟ್ ಉದ್ಘಾಟಿಸಿದರು. ಉಪೇಂದ್ರ ನಾಯಕ್ (ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್ ಸುಳ್ಯ ನಗರ) ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೀತಾ ಅಮೈ ಕೇವಳ (ಮಾತೃಶಕ್ತಿ ,ಜಿಲ್ಲಾ ಪ್ರಮುಖರು) ಡಾ.ವೀಣಾ (ಸ್ತ್ರೀ ಆರೋಗ್ಯ ತಜ್ಞೆ) ವರ್ಷಿತ್ ಚೊಕ್ಕಾಡಿ (ಬಜರಂಗದಳ ಸಂಚಾಲಕರು ಸುಳ್ಯ ನಗರ) ಉಪಸ್ಥಿತರಿದ್ದರು. ಈ ಸಂದರ್ಭ ಪ್ರಕಾಶ್ ಯಾದವ್, ನವೀನ್ ಎಲಿಮಲೆ, ಕಿರಣ್ ಕುಮಾರ್, ಮಿಥುನ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದ ವೈಶಿಷ್ಟ್ಯ
ಬೇಸಿಗೆಯಲ್ಲಿ ಮಕ್ಕಳ ಮನಸ್ಸಿಗೆ ಮುದ ನೀಡುವ ಹಾಗೂ ಬುದ್ಧಿಗೆ ಇಂಬು ಕೊಡುವ ಈ ಶಿಬಿರದಲ್ಲಿ 7 ರಿಂದ 18 ವರ್ಷ ವಯಸ್ಸಿನ ಮಕ್ಕಳು ಭಾಗವಹಿಸಲು ಅವಕಾಶವಿದೆ. ಮಕ್ಕಳಿಗೆ ಮುಖ್ಯವಾಗಿ ಹಾಡುಗಳು, ಆಟ, ಸಂಪನ್ಮೂಲ ವ್ಯಕ್ತಿಗಳಿಂದ ಇತರ ಚಟುವಟಿಕೆಗಳು ಹಾಗೂ ಸಂಸ್ಕಾರ ಪಾಠಗಳು ಕಲಿಸಿಕೊಡಲಾಗುವುದು. ಸಂಗೀತ, ಭಜನೆ, ಕುಣಿತ ಭಜನೆ, ಜನಪದ, ಭಕ್ತಿಗೀತೆ, ಸುಗಮ ಸಂಗೀತ, ದೇಶಭಕ್ತಿಗೀತೆ, ಇನ್ನಿತರ ಹಾಡುಗಳನ್ನು ಕಲಿಸಿಕೊಡಲಾಗುವುದು. ಕು.ಅಭಿಜ್ಞಾ ನಾಟಿಕೇರಿ ಶಿಬಿರಕ್ಕೆ ನಿರ್ದೇಶನ ನೀಡುತ್ತಿದ್ದಾರೆ. ಈಗಾಗಲೇ ಶಿಬಿರದಲ್ಲಿ 190 ಶಿಬಿರಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆ. ಎಪ್ರಿಲ್ 20ರಂದು ಆರಂಭಗೊಂಡ ಶಿಬಿರ ಮೇ 2ರ ವರೆಗೆ ಬೆಳಗ್ಗೆ 9ರಿಂದ ಅಪರಾಹ್ನ 4ರ ವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.