ನ್ಯೂಸ್ ನಾಟೌಟ್: ಉತ್ತರ ಪತ್ರಿಕೆಯನ್ನು ಸೂಕ್ತ ಉತ್ತರ ಬರೆಯುವುದನ್ನು ನೋಡಿದ್ದೇವೆ. ಉತ್ತರ ಗೊತ್ತಿಲ್ಲದಿದ್ದರೂ ಕೆಲವರು ಪುಟಗಟ್ಟಲೆ ಬಾಯಿಗೆ ಬಂದದ್ದನ್ನೆಲ್ಲ ಬರೆಯುವುದರ ಬಗ್ಗೆಯೂ ಕೇಳಿದ್ದೇವೆ. ಆದರೆ ಇಲ್ಲಿ ಕೆಲವರು ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ. ವಿಶೇಷವೆನೆಂದರೆ ಹೀಗೆ ಬರೆದ ವಿದ್ಯಾರ್ಥಿಗಳನ್ನು ಅಧ್ಯಾಪಕರು ಹೆಚ್ಚಿನ ಅಂಕ ನೀಡಿ ಪಾಸ್ ಮಾಡಿದ್ದಾರೆ. ಇದೀಗ ಈ ಘಟನೆಯೇ ಭಾರಿ ಚರ್ಚೆಗೆ ಕಾರಣವಾಗಿದೆ.
ಉತ್ತರ ಪ್ರದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಉತ್ತರಗಳ ಬದಲು “ಜೈ ಶ್ರೀ ರಾಮ್” ಘೋಷಣೆ ಮತ್ತು ಕ್ರಿಕೆಟಿಗರ ಹೆಸರನ್ನು ಬರೆದು ಪರೀಕ್ಷೆ ಮುಗಿಸಿದ್ದಾರೆ. ಅವರೇನೋ ಪಾಸಾಗಿದ್ದಾರೆ. ಆದರೆ ನಂತರ ಕಾನೂನು ಉರುಳು ಪ್ರಾಧ್ಯಾಪಕರನ್ನು ಸುತ್ತಿಕೊಂಡಿದೆ.
ಉತ್ತರ ಪತ್ರಿಕೆಯಲ್ಲಿ ಸಿನಿಮಾ ಹಾಡುಗಳು, ಮ್ಯೂಸಿಕ್ ಮತ್ತು ಧಾರ್ಮಿಕ ಘೋಷಣೆಗಳನ್ನು ಬರೆದು, ಅದಕ್ಕೆ ಅಂಕಗಳನ್ನು ನೀಡುವುದಕ್ಕಾಗಿ ವಿದ್ಯಾರ್ಥಿಗಳಿಂದ ಹಣವನ್ನು ಲಂಚ ಪಡೆದ ಆರೋಪದ ಮೇಲೆ ಜೌನ್ ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ. ವಿಶ್ವವಿದ್ಯಾನಿಲಯದ ಕೆಲವು ಅಧಿಕಾರಿಗಳ ಸಹಕಾರದಿಂದ, ಶೂನ್ಯ ಅಂಕ ಪಡೆದ ವಿದ್ಯಾರ್ಥಿಗಳಿಗೂ ಶೇ.60ಕ್ಕಿಂತ ಹೆಚ್ಚು ಅಂಕ ನೀಡಿ ಉತ್ತೀರ್ಣಗೊಳಿಸಲಾಗಿದೆ ಎಂದು ವಿದ್ಯಾರ್ಥಿ ಮುಖಂಡ ದಿವ್ಯಾಾಂಶು ಸಿಂಗ್ ಅವರು ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
ಆರ್ಟಿಐ ಮೂಲಕ ಪಡೆಯಲಾದ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಪ್ರತಿಗಳಲ್ಲಿ ಈ ಅಕ್ರಮಗಳನ್ನು ಗುರುತಿಸಲಾಗಿದೆ. ಮರು ಮೌಲ್ಯಮಾಪನದ ಅಂಕಗಳಲ್ಲಿ ಗಮನಾರ್ಹ ವ್ಯತ್ಯಾಸ ಉಂಟಾಗಿದೆ. “ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ನೀಡಲಾಗಿದೆ ಎಂಬ ಆರೋಪವಿತ್ತು. ಹಾಗಾಗಿ ನಾವು ಸಮಿತಿಯನ್ನು ರಚಿಸಿದ್ದೇವೆ. ಆ ಸಮಿತಿಯು ತನ್ನ ವರದಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡಲಾಗಿದೆ ಎಂದು ಹೇಳಿದೆ” ಎಂದು ಉಪಕುಲಪತಿ ವಂದನಾ ಸಿಂಗ್ ಹೇಳಿದರು.