ನ್ಯೂಸ್ ನಾಟೌಟ್: ಒಂದು ಟೋಲ್ ಪ್ಲಾಜಾದಲ್ಲಿ ರಾತ್ರಿ ಅಪರಿಚಿತ ಬಂದೂಕುಧಾರಿ ಮುಸುಕುಧಾರಿಗಳು ದಾಳಿ ನಡೆಸಿದ್ದು, ಅವರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಓಡಿದ ಇಬ್ಬರು ಟೋಲ್ ಸಿಬ್ಬಂದಿ ತೆರೆದ ಬಾವಿಗೆ ಬಿದ್ದು ಪ್ರಾಣ ಬಿಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಈ ಕೃತ್ಯದ ದೃಶ್ಯಗಳು ಟೋಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಟೋಲ್ ಪಾವತಿ ವಿವಾದಕ್ಕೆ ಸಂಬಂಧಿಸಿದಂತೆ ಮುಸುಕುಧಾರಿ ಬಂದೂಕುಧಾರಿಗಳು ದಾಳಿ ನಡೆಸಿದ್ದು, ತಮ್ಮನ್ನು ರಕ್ಷಿಸಿಕೊಳ್ಳಲು ಓಡಿದ ಆಗ್ರಾದ ಶ್ರೀನಿವಾಸ್ ಪರಿಹಾರ್ ಮತ್ತು ನಾಗ್ಪುರದ ಶಿವಾಜಿ ಕಂಡೆಲೆ ಎಂಬವರು ಬಾವಿಗೆ ಬಿದ್ದು ಮೃತರಾಗಿದ್ದಾರೆ. ಅವರ ಶವಗಳನ್ನು ನಿನ್ನೆ ಬಾವಿಯಿಂದ ಹೊರತೆಗೆಯಲಾಯಿತು. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ- 44 ರಲ್ಲಿರುವ ದಗ್ರೈ ಟೋಲ್ ಪ್ಲಾಜಾದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಆತಂಕಕಾರಿ ದೃಶ್ಯಗಳು ಸೆರೆಯಾಗಿವೆ.
ನಾಲ್ಕು ಬೈಕ್ಗಳಲ್ಲಿ ಮುಸುಕುಧಾರಿ ವ್ಯಕ್ತಿಗಳು ಟೋಲ್ ಬೂತ್ಗಳ ಬಳಿ ಬಂದು ಏಕಾಏಕಿ ಟೋಲ್ ಕೌಂಟರ್ಗಳ ಬಾಗಿಲುಗಳನ್ನು ಒದ್ದು ಮುರಿದರು. ಬೂತ್ಗಳ ಒಳಗೆ ನುಗ್ಗಿ ಕಂಪ್ಯೂಟರ್ಗಳನ್ನು ಹಾನಿಗೊಳಿಸಿದರು. ಟೋಲ್ ಪ್ಲಾಜಾ ಸಿಬ್ಬಂದಿಯನ್ನು ಥಳಿಸಿ ಅವರನ್ನು ಹೊರಗೆ ಎಳೆದು ಹಾಕಿದರು. ದಾಳಿಕೋರರು ಗಾಳಿಯಲ್ಲಿ ಗುಂಡು ಹಾರಿಸಲು ಆರಂಭಿಸಿದಾಗ ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ಪಕ್ಕದ ಹೊಲದತ್ತ ಓಡಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ ಓಡುತ್ತಿದ್ದಾಗ ಪರಿಹಾರ್ ಮತ್ತು ಕಂಡೆಲೆ ಕಚೇರಿಯ ಹಿಂಭಾಗದ ತೆರೆದ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿದರು. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.