ಗ್ರಂಥಾಲಯದಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ (Library), ‘ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ’ ಎಂಬ ಗೋಡೆಬರಹ ಪ್ರಕಟಿಸಲಾಗಿದೆ.
ಗ್ರಂಥಾಲಯದ ಪ್ರವೇಶ ದ್ವಾರದ ಗೋಡೆ ಮೇಲೆ ಬರಹ ಪ್ರಕಟಿಸಲಾಗಿದೆ. ಈ ಗ್ರಂಥಾಲಯ ರಾಜ್ಯ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ಗೋಡೆ ಬರಹಕ್ಕೆ ಸಾಮಾಜಿಕ ಜಾಲತಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಿಂದೂಪರ ಸಂಘಟನೆಗಳು ಗೋಡೆಬರಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಂದಿರದ ಬದಲಾಗಿ ಮಸೀದಿ ಎಂದು ಯಾಕೆ ಬಳಕೆ ಮಾಡಲ್ಲ ಎಂದು ಪ್ರಶ್ನಿಸಿವೆ.
ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎಂಬ ಬರಹಕ್ಕೆ ಬದಲಾಗಿ, ‘ಜ್ಞಾನ ದೇಗುಲವಿದು, ದೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಸಿದ್ದು ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ಈ ವಿಚಾರ ವಿವಾದಕ್ಕೀಡಾಗಿ ನಂತರ ಸರ್ಕಾರ ಮೊದಲಿನಂತೆಯೇ ಗೋಡೆ ಬರಹ ಪ್ರಕಟಿಸಲು ಆದೇಶ ನೀಡಿತ್ತು. ಇದೀಗ ಮತ್ತೊಂದು ಗೋಡೆ ಬರಹ ವಿವಾದಕ್ಕೆ ಕಾರಣವಾಗಿದೆ.