ನ್ಯೂಸ್ ನಾಟೌಟ್: ಕನ್ನಡ ಸಿನಿಮಾ ಜಗತ್ತಿನಲ್ಲಿ ಬಹು ನಿರೀಕ್ಷೆಯ ಸಿನಿಮಾವಾಗಿ ಜನರಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ಯುವ’ ಸಿನಿಮಾ ಇತ್ತೀಚೆಗೆ ಬೆಂಗಳೂರಿನಲ್ಲಿ ಭರ್ಜರಿಯಾಗಿ ರಿಲೀಸ್ ಆಗಿತ್ತು. ವರನಟ ದಿವಂಗತ ಡಾ. ರಾಜ್ ಕುಮಾರ್ ಕುಟುಂಬದ ಕುಡಿ ಯುವರಾಜ್ ಕುಮಾರ್ ನಟನೆಯ ಮೊದಲ ಸಿನಿಮಾ ಎಲ್ಲೆಡೆ ಸದ್ದು ಮಾಡಿರುವುದಂತೂ ನಿಜ. ಈ ಸಿನಿಮಾದ ರಿಲೀಸ್ ದಿನವೇ ಬೆಳ್ ಬೆಳಗ್ಗೆ ಖುದ್ದಾಗಿ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ ಅವರು ಉದ್ಯಾನನಗರಿಗೆ ತೆರಳಿ ಗೆಳೆಯ ಯುವರಾಜ್ ಕುಮಾರ್ ಗೆ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಇದೇ ವೇಳೆ ಅಕ್ಷಯ್ ಕೆ.ಸಿ ಅವರು ಜೀವದ ಗೆಳೆಯನ ಸಿನಿಮಾ ಯಶಸ್ವಿಯಾಗಿ ನೂರು ದಿನ ಓಡಲೆಂದು ಹೃದಯ ತುಂಬಿ ಶುಭ ಹಾರೈಸಿದ್ದಾರೆ.
ವರನಟ ಡಾ. ರಾಜ್ ಕುಮಾರ್ ಕುಟುಂಬದ ಜೊತೆಗೆ ಉತ್ತಮ ಒಡನಾಟ ಹೊಂದುವುದು ಸಣ್ಣ ವಿಚಾರವಲ್ಲ. ಆದರೆ ಅಕ್ಷಯ್ ಕೆ.ಸಿ ಅವರಿಗೆ ರಾಜ್ ಕುಮಾರ್ ಕುಟುಂಬದ ನಂಟಿನ ಅದೃಷ್ಟ ಸುಲಭವಾಗಿಯೇ ಸಿಕ್ಕಿತು ಅಂದರೆ ತಪ್ಪಾಗಲಾರದು. ಕಾಲೇಜು ದಿನಗಳಲ್ಲೇ ಅಕ್ಷಯ್ ಕೆ.ಸಿ ಅವರು ದೊಡ್ಮನೆಗೆ ತುಂಬಾ ಹತ್ತಿರವಾಗಿದ್ದರು. ಡಾ. ರಾಜ್ ಕುಮಾರ್ ಹಿರಿಯ ಮಗ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಕಾಲೇಜು ದಿನಗಳಿಂದಲೇ ಅಕ್ಷಯ್ ಕೆ.ಸಿ ಅವರಿಗೆ ಸ್ನೇಹಿತರು. ಕಳೆದ ಹಲವು ವರ್ಷಗಳಿಂದ ಇವರಿಬ್ಬರ ನಡುವೆ ಗಾಢ ಸ್ನೇಹ ಬೆಳೆದಿದೆ. ಈ ವಿಚಾರವನ್ನು ಅಕ್ಷಯ್ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ನ್ಯೂಸ್ ನಾಟೌಟ್ ಕೆದಕಿ ಈ ವಿಷಯವನ್ನು ಕೇಳಿದಾಗ ಮೊದಲ ಸಲ ಹೊರಗೆ ಬಂದಿದೆ. ಈ ವಿಚಾರದಲ್ಲಿ ಪ್ರಚಾರ ಮಾಡಬೇಡಿ, ಅವರ ಸಿನಿಮಾಕ್ಕೆ ಪ್ರಚಾರ ಕೊಡಿ ಎಂದು ಅವರು ಮನವಿ ಮಾಡಿದರೂ ನಾವು ಅವರ ಮನಸ್ಸನ್ನು ಒಲಿಸಿ ಒಂದಷ್ಟು ಮಾಹಿತಿಗಳನ್ನು ಪಡೆದುಕೊಂಡು ಈ ವಿಚಾರವನ್ನು ಹೊರಗೆ ತಂದಿದ್ದೇವೆ. ಕಾರಣ ಇಷ್ಟೆ..ಯುವರಾಜ್ ಕುಮಾರ್ ಮೊದಲ ಸಲ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳ ದೇವ್ರು ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಇದೀಗ ಎಲ್ಲರು ಕೂಡ ಯುವರಾಜ್ ಕುಮಾರ್ ಮೂಲಕ ಪುನೀತ್ ಅವರನ್ನು ಕಾಣುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನೆರೆಯ ಕೊಡಗಿನಲ್ಲೂ ಈ ಸಿನಿಮಾ ಹೆಚ್ಚು ಯಶಸ್ವಿ ಆಗಲಿ ಅನ್ನೋದೇ ನಮ್ಮ ಆಶಯ. ನಮ್ಮ ಒತ್ತಾಯಕ್ಕೆ ಮಣಿದು ಅಕ್ಷಯ್ ಕೆ.ಸಿ ಅವರು ಒಂದಷ್ಟು ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಂಡರು. “ಮಂಗಳೂರಿಗೆ ಬಂದಾಗ ಯುವರಾಜ್ ಕುಮಾರ್ ನನ್ನ ಭೇಟಿ ಆಗದೆ ವಾಪಸ್ ಹೋಗುತ್ತಿರಲಿಲ್ಲ. ಕೆಲವು ತಿಂಗಳ ಹಿಂದೆ ಶೂಟಿಂಗ್ ಗೆ ಮಂಗಳೂರಿಗೆ ಬಂದಾಗಲೂ ಇಬ್ಬರು ಭೇಟಿಯಾಗಿದ್ದೆವು. ನಮ್ಮ ತಾತ ದಿವಂಗತ ಕುರುಂಜಿ ವೆಂಕಟರಮಣ ಗೌಡರು ಗ್ರಾಮೀಣ ಭಾಗದಲ್ಲಿ ಕಟ್ಟಿರುವ ಶಿಕ್ಷಣ ಸಂಸ್ಥೆಗಳ ಬಗ್ಗೆಯೂ ಯುವರಾಜ್ ಕುಮಾರ್ ಆಸಕ್ತಿಯಿಂದ ಸಾಕಷ್ಟು ಮಾಹಿತಿಗಳನ್ನು ನನ್ನಿಂದ ಕೇಳಿ ಪಡೆದುಕೊಂಡಿದ್ದಾರೆ. ಯುವರಾಜ್ ಕುಮಾರ್ ಮಾತ್ರವಲ್ಲ ಅವರ ಸಹೋದರ ವಿನಯ್ ರಾಜ್ ಕುಮಾರ್ ಕೂಡ ನಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ” ಎಂದು ತಿಳಿಸಿದರು.
ಅಕ್ಷಯ್ ಕೆ.ಸಿ ಅವರು ಸಿನಿಮಾ ರಿಲೀಸ್ ಆದ ಮೊದಲ ದಿನ ಬೆಂಗಳೂರಿನ ಸಂತೋಷ್ ಥಿಯೇಟರ್ ನಲ್ಲಿ ಫಸ್ಟ್ ಡೇ ಫಸ್ಟ್ ಶೋ ವೀಕ್ಷಣೆ ಮಾಡಿದ್ದಾರೆ. ಮಾತ್ರವಲ್ಲ ಒಂದು ಇಡೀ ದಿನ ಇತರೆ ಎಲ್ಲ ಸಹಪಾಠಿಗಳು ಒಟ್ಟುಗೂಡಿ ಗೆಳೆಯನ ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಅಕ್ಷಯ್ ಅವರು ಒಂದು ದಿನದ ತಮ್ಮ ಕೆಲಸ ಕಾರ್ಯವನ್ನು ಸಂಪೂರ್ಣ ಬದಿಗೊತ್ತಿ ಗೆಳೆಯನ ಸಿನಿಮಾಕ್ಕಾಗಿ ವಿನಿಯೋಗಿಸಿದ್ದು ನಿಷ್ಕಲ್ಮಶ ಗೆಳೆತನಕ್ಕೆ ಸಾಕ್ಷಿಯಾಗಿದೆ. ಇದೇ ವೇಳೆ ಸುಳ್ಯದ ಮಿಥುನ್ ಕಡೆಂಗ ಕೂಡ ಅಕ್ಷಯ್ ಕೆ.ಸಿ ಅವರ ಜೊತೆಗಿದ್ದರು. ಇನ್ನು ಯುವ ಸಿನಿಮಾ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಇಡೀ ಸಿನಿಮಾ ತಂದೆಯ ಪಾತ್ರದ ಸುತ್ತ ತಿರುಗುತ್ತದೆ.
ಸಂತೋಷ್ ಆನಂದ್ ರಾಮ್ ನಿರ್ದೇಶನ, ವಿಜಯ್ ಕಿರಗಂದೂರ್ ನಿರ್ಮಾಣದ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ. ದೊಡ್ಡ ..ದೊಡ್ಡ ಸಿನಿಮಾ ಪರಿಚಯಿಸಿರುವ ಹೊಂಬಾಳೆ ಫಿಲ್ಮ್ಸ್ ಮೂಲಕ ಸಿನಿಮಾ ತೆರೆಗೆ ಬಂದಿರುವುದು ವಿಶೇಷ. ಕಾಂತಾರ ಸಿನಿಮಾ ನಾಯಕಿ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ ಸೇರಿದಂತೆ ಹಲವು ಪಾತ್ರವರ್ಗಗಳು ಚಿತ್ರದಲ್ಲಿವೆ. ಈ ಸಿನಿಮಾದಲ್ಲಿ ಅಪ್ಪು ಸಿಗ್ನೆಚರ್ ಸ್ಟೈಲ್ ನಲ್ಲಿ ಯುವರಾಜ್ ಕುಮಾರ್ ಫೈಟ್ ಮಾಡಿರುವುದು ವಿಶೇಷ. ಒಟ್ಟಿನಲ್ಲಿ ಈ ಸಿನಿಮಾ ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಂತೂ ಯಾವುದೇ ಅನುಮಾನವಿಲ್ಲ. ಈ ಸಿನಿಮಾ ನಿಮ್ಮೂರಿನ ಥಿಯೇಟರ್ ಗೆ ಬಂದಾಗ ಒಮ್ಮೆ ನೀವೂ ಕೂಡ ಕುಟುಂಬ ಸಮೇತರಾಗಿ ಹೋಗಿ ನೋಡಿ ಬನ್ನಿ.