ನ್ಯೂಸ್ ನಾಟೌಟ್: ‘ಸೌಜನ್ಯ’ ಎಂಬ ಸ್ಪುರದ್ರೂಪಿ ಹೆಣ್ಣುಮಗಳ ನ್ಯಾಯಕ್ಕಾಗಿ ಕಳೆದ 12 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಹೆಣ್ಣು ಮಗಳ ನ್ಯಾಯದ ಕೂಗು ದಿಲ್ಲಿಯವರೆಗೂ ತಲುಪಿದೆ. ಹಾಗಿದ್ದರೂ ಕೂಡ ಇಲ್ಲಿ ತನಕ ಆಕೆಗೆ ನ್ಯಾಯ ಸಿಗೋದಕ್ಕೆ ಸಾಧ್ಯವೇ ಆಗಿಲ್ಲ. ಹಾಗಾದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸರಿ ಇಲ್ಲವೇ..? ನಾವು ಆರಿಸಿ ಕಳುಹಿಸೊ ನಾಯಕರು ಜನರ ನೋವು ನಲಿವುಗಳಿಗೆ ಎಷ್ಟು ಸ್ಪಂದಿಸುತ್ತಿದ್ದಾರೆ..? ಯಾವುದಾದರೂ ಒತ್ತಡಗಳಿಗೆ ಮಣಿದು ಕಾರ್ಯ ನಿರ್ವಹಿಸುತ್ತಿದ್ದಾರೆಯೇ..? ಇಂತಹ ನೂರಾರು ಪ್ರಶ್ನೆಗಳು ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಜನರ ಮನದ ಉತ್ತರ ಸಿಗದ ಪ್ರಶ್ನೆಯಾಗಿದೆ.
ನಾವೊಂದು ತೀರ್ಮಾನ ಮಾಡಿ ಬಿಡೋಣ, ಸೌಜನ್ಯ ಅನ್ನುವ ಸಾಮಾನ್ಯ ಹುಡುಗಿಗೆ ನ್ಯಾಯ ಕೊಡಿಸಲು ಧ್ವನಿ ಎತ್ತದ ಯಾವುದೇ ಪಕ್ಷದ ಯಾವುದೇ ವ್ಯಕ್ತಿಗೆ ಈ ಸಲ ಮತದಾನ ಮಾಡೋದು ಬೇಡ. ಹೆಣ್ಣಿನ ನ್ಯಾಯಕ್ಕೆ ಧ್ವನಿ ಎತ್ತದ ನಾಲಾಯಕ್ ನಾಯಕರು ಮುಂದೆ ನಮ್ಮ ಮನೆಯಲ್ಲೇ ಇಂತಹ ಪರಿಸ್ಥಿತಿ ಆದ್ರೆ ಕೇಳ್ತಾರಾ..? ಸೌಜನ್ಯ ಕೊಲೆ ಆಗಿರೋದು ನಿಜ, ಆಕೆಯನ್ನು ಚಿತ್ರಹಿಂಸೆ ಮಾಡಿ ಕೊಂದು ತಿಂದಿದ್ದೂ ನಿಜ..ಇದೆಲ್ಲವು ನಮ್ಮ ಕಣ್ಣೆದುರಿಗಿರುವ ಸತ್ಯ. ಆದರೆ ಆರೋಪಿಗಳು ಯಾರು..? ಈ ಬಗ್ಗೆ ಸ್ಪಷ್ಟತೆ ಇಲ್ಲ. ಇಂದು ಒಂದು ಕೊಲೆ ನಡೆದರೆ ಅದನ್ನು ಕ್ಷಣಾರ್ಧದಲ್ಲಿ ಕಂಡು ಹಿಡಿಯುವ ವ್ಯವಸ್ಥೆ ನಮ್ಮಲ್ಲಿ ಇದೆ. ನಮ್ಮ ಪೊಲೀಸ್ ಇಲಾಖೆ, ಸಿಬಿಐ ಅಧಿಕಾರಿಗಳು ದೇಶದಲ್ಲಿ ಸಾಕ್ಷಿಯೇ ಇಲ್ಲದ ಅದೆಷ್ಟೋ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಕಂಡು ಹಿಡಿದಿದ್ದಾರೆ. ಆದರೆ ಸೌಜನ್ಯಳ ಪ್ರಕರಣದಲ್ಲಿ ಅದು ಏಕೆ ಸಾಧ್ಯವಾಗಿಲ್ಲ. ಸಿಬಿಐ ಕೋರ್ಟ್ ಸಂತೋಷ್ ರಾವ್ ನಿರಪರಾಧಿ ಅಂತ ಘೋಷಿಸಿದ ಬಳಿಕ ಮತ್ತೊಬ್ಬ ಆರೋಪಿ ಇರಲೇಬೇಕಲ್ವ..? ಆತ ಯಾರು..? ಈ ಪ್ರಶ್ನೆಗೆ ಇದುವರೆಗೆ ಏಕೆ ಉತ್ತರ ಸಿಕ್ಕಿಲ್ಲ? ಇದರಲ್ಲಿ ಏನೋ ಅನುಮಾನ ಇದೆ. ಈ ವಿಚಾರದ ಬಗ್ಗೆ ನಮ್ಮ ನಾಯಕರು ಮೌನವಹಿಸಿರೋದು ಏಕೆ..? ಇಂತಹ ಅನ್ಯಾಯಗಳು ಸಮಾಜದಲ್ಲಿ ನಡೆದಾಗ ಅದನ್ನು ಪ್ರಶ್ನಿಸದೆ ಇರುವ ನಾಯಕರು ನಮಗೆ ಬೇಕೆ..? ಈ ಸಲ ವೋಟ್ ಗೆ ನಿಂತಿರುವ ಪಕ್ಷ ಅಥವಾ ವ್ಯಕ್ತಿ, ಅದು ಯಾವುದೇ ಪಕ್ಷ ಆಗಿರಲಿ ಮುಲಾಜಿಲ್ಲದೆ ಸೋಲಿಸಿ. ಆಗ ಜನ ಶಕ್ತಿ ಏನು ಅನ್ನೋದು ಗೊತ್ತಾಗುತ್ತೆ.
ಸೌಜನ್ಯಳ ಪರವಾಗಿ ಇರುವವರೆಲ್ಲ ನೋಟಾಕ್ಕೆ ಹಾಕಿ. ಈ ಮೂಲಕ ಸೌಜನ್ಯಳೇ ಅಭ್ಯರ್ಥಿಯಾಗಲಿ. ಆಕೆ ಪರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮತದಾನ ಬೀಳುತ್ತದೆ ಅನ್ನೋದನ್ನು ನೋಡೋಣ. ಸ್ವತಃ ಮಹೇಶ್ ಶೆಟ್ಟಿ ತಿಮರೋಡಿ ಅವರೇ ಇದೀಗ ನೋಟಾಕ್ಕೆ ಹಾಕಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಭಾರತ ಮಾತೆಯನ್ನು ನಾವು ಹೆಣ್ಣಿಗೆ ಹೋಲಿಸಿದ್ದೇವೆ. ಅದೆಷ್ಟೋ ಸಲ ಮನೆಯ ಹೆಣ್ಣು ಮಕ್ಕಳಿಗೆ ತೊಂದರೆ ಆದಾಗ ನಾವು ನೋಡಿಕೊಂಡು ಸುಮ್ಮನಿರಲಿಲ್ಲ, ಸಂದರ್ಭ ಬಂದಾಗ ನಾಲ್ಕೂ ತಟ್ಟಿದ್ದೇವೆ ಕೂಡ. ಹೆಣ್ಣಿನ ಬಗ್ಗೆ ಅಪಾರ ಗೌರವ ಇಟ್ಟುಕೊಂಡ ಪ್ರತಿಯೊಬ್ಬರು ಕೂಡ ಇದನ್ನು ಮಾಡಿದ್ದಾರೆ. ಈಗ ಮತ್ತೊಮ್ಮೆ ನಮ್ಮ ಪಾಲಿಗೆ ಅಂತಹ ಒಂದು ಅವಕಾಶ ಸಿಕ್ಕಿದೆ. ಈ ಸಲ ಅದರ ಶಕ್ತಿ ಏನೆಂದು ತೋರಿಸೋಣ.
ದಕ್ಷಿಣ ಕನ್ನಡ ಜಿಲ್ಲೆಯ ನಮ್ಮ ನಾಯಕರಿಗೆ ಸೌಜನ್ಯ ಎಂಬ ಹೆಸರು ಮುಗಿದ ಅಧ್ಯಾಯವಾಗಿ ಬಿಟ್ಟಿದೆ. ಈ ಸಲ ಒಬ್ಬರು ಕೂಡ ಈ ಬಗ್ಗೆ ಯಾವುದೇ ಕಾಮೆಂಟ್ ಮಾಡಿಲ್ಲ. ‘ಕನಿಷ್ಟ ಘಟನೆಯನ್ನು ಖಂಡಿಸುತ್ತೇವೆ, ನ್ಯಾಯ ಕೊಡಿಸುವುದಕ್ಕೆ ನಾವು ಸಿದ್ಧರಿದ್ದೇವೆ’ ಎಂದು ಹೇಳುವುದಕ್ಕೂ ಅವರಿಗೆ ನಾಲಿಗೆ ಹೊರಡಲಿಲ್ಲ. ಅದರಲ್ಲಿ ಒಬ್ಬ ನಾಯಕರಂತೂ ಒಂದು ಹೆಜ್ಜೆ ಮುಂದೆ ಹೋಗಿ ಬಿಟ್ಟಿದ್ದಾರೆ. “ನ್ಯೂಸ್ ನಾಟೌಟ್ ನಾನು ಹೇಳಿದ್ದನ್ನು ಮಾತ್ರ ನೀವು ರೆಕಾರ್ಡ್ ಮಾಡಿಕೊಳ್ಳಿ, ನೀವು ಪ್ರಶ್ನೆ ಕೇಳಬಾರದು’ ಎಂದು ನೇರವಾಗಿ ನಮ್ಮನ್ನು ಹೇಳಿದ್ರು. ಹಾಗಾದ್ರೆ ನಾವು ನಿಮ್ಮನ್ನು ಕೇಳ್ತವೇ..” ಏನ್ ಸಾರ್ ನಿಮಗೆ ನಾವು ಎಲ್ಲಾದರೂ ಸೌಜನ್ಯಳ ಬಗ್ಗೆ ಪ್ರಶ್ನೆ ಕೇಳ್ತೇವೇ ಅನ್ನೋ ಭಯನಾ..? ಅಥವಾ ಆ ಪ್ರಶ್ನೆಯಿಂದ ನೀವು ಎಸ್ಕೇಪ್ ಆಗೋಕ್ಕೆ ಹಾಗೆ ಹೇಳಿದ್ರಾ..? ಬೇರೆ ಮಾಧ್ಯಮಗಳಿಗೆ ನೀವು ಪ್ರಶ್ನೆ ಕೇಳೋಕೆ ಹೇಗೆ ಬಿಟ್ರಿ..? ನಮಗೊಂದು ಅವರಿಗೊಂದಾ ಅನ್ನೋದನ್ನ ನಾವು ಕೇಳ್ತೇವೆ. ‘ನ್ಯೂಸ್ ನಾಟೌಟ್’ ಮಾಧ್ಯಮ ಆರಂಭದಿಂದಲೂ ಒಂದು ಮಾಧ್ಯಮವಾಗಿ ಸೌಜನ್ಯಳ ನ್ಯಾಯಕ್ಕಾಗಿ ಹೋರಾಡುತ್ತಲೇ ಬಂದಿದೆ. ಆಕೆಯ ನ್ಯಾಯಕ್ಕಾಗಿ ಉಚಿತವಾಗಿಯೇ ಹಲವು ಲೈವ್ ಗಳನ್ನು ಮಾಡಿದ್ದೇವೆ. ಒಂದಷ್ಟು ಕೇಸ್ ಗಳನ್ನು ಕೂಡ ಜಡಿಸಿಕೊಂಡಿದ್ದೇವೆ. ಒಂದಂತೂ ಸ್ಪಷ್ಟಪಡಿಸುತ್ತೇವೆ. ಇದುವರೆಗೂ ನಾವು ಯಾವ ವ್ಯಕ್ತಿಯ ತೇಜೋವಧೆ ಮಾಡಿಲ್ಲ. ಈತನೇ ಆರೋಪಿ ಎಂದು ಎಲ್ಲಿಯೂ ಇಲ್ಲ. ಪ್ರಕರಣದ ಹಿಂದಿರುವ ನಿಜವಾದ ಆರೋಪಿಯನ್ನು ಕಾನೂನಿನಡಿ ಬಂಧಿಸಿ ಎಂದು ಒತ್ತಾಯಿಸಿದ್ದೇವೆ. ಮಾಧ್ಯಮವಾಗಿ ನಮ್ಮ ಕೆಲಸ ಮಾಡಿದ್ದೇವೆ. ಕಾನೂನಿಗಿಂತ ದೊಡ್ಡವರು ನಮ್ಮ ದೇಶದಲ್ಲಿ ಯಾರೂ ಇಲ್ಲ. ನಾವೆಲ್ಲರೂ ಕಾನೂನಿನ ಅಡಿಯಲ್ಲಿ ಸಂವಿಧಾನದ ಅಶೋತ್ತರಗಳಿಗೆ ಸರಿಯಾಗಿ ಬದುಕುವವರು. ಹೀಗಾಗಿ ಜನ ಶಕ್ತಿ ಅನ್ನೋದನ್ನು ತೋರಿಸೋಕೆ ಇದು ಸೂಕ್ತ ಸಮಯ. ಈ ಬರಹವನ್ನ ಓದಿ ಮುಗಿಸುವಷ್ಟರಲ್ಲಿ ಒಂದಷ್ಟು ಜನರು ವಿರೋಧವಾಗಿ ಮಾತನಾಡಬಹುದು. ಮತ್ತೊಂದಷ್ಟು ಜನ ನಮ್ಮ ಪರವಾಗಿ ಮಾತನಾಡಬಹುದು. ಗಟ್ಟಿ ಧ್ವನಿಯಾಗಿ ಧೈರ್ಯವಾಗಿ ಹೇಳಬೇಕಾದನ್ನ ಹೇಳಿದ್ದೇವೆ.