ನ್ಯೂಸ್ ನಾಟೌಟ್: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 13ನೇ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ಗೆ (Rishabh Pant) ದಂಡ ವಿಧಿಸಲಾಗಿದೆ.
ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಬೌಲಿಂಗ್ ವೇಳೆ ಸ್ಲೋ ಓವರ್ ರೇಟ್ ತಪ್ಪು ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ ಸಮಯದೊಳಗೆ ಪಂದ್ಯವನ್ನು ಮುಗಿಸಿರಲಿಲ್ಲ. ಈ ಕಾರಣಕ್ಕಾಗಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.
ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನನ್ನು ಕಡಿತ ಮಾಡಲಾಗುತ್ತದೆ. ಹಾಗೆಯೇ ಈ ತಪ್ಪನ್ನು ಮಾಡಿದ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇನ್ನು ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ. ಇದೀಗ ರಿಷಭ್ ಪಂತ್ ಮೊದಲ ಹಂತದ ತಪ್ಪನ್ನು ಮಾಡಿದ್ದು, ಹೀಗಾಗಿ 12 ಲಕ್ಷ ರೂ. ಮಾತ್ರ ದಂಡ ವಿಧಿಸಲಾಗಿದೆ.