ನ್ಯೂಸ್ ನಾಟೌಟ್: ಮಗುವನ್ನು ದತ್ತು ತೆಗೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಸೋನು ಶ್ರೀನಿವಾಸ್ ಗೌಡ ಅವರನ್ನು ಬಿಗ್ ಬಾಸ್ ಸ್ಪರ್ಧಿ ಹಾಗೂ ನಟ ರಾಕೇಶ್ ಅಡಿಗ (Rakesh Adiga) ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಜೈಲಿಗೆ ಬಂದು ಸೋನು ಶ್ರೀನಿವಾಸ ಗೌಡ ಅವರಿಂದ ಮಾಹಿತಿಯನ್ನೂ ಪಡೆದು ಕೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಮೊನ್ನೆಯಷ್ಟೇ ಸೋನು ಗೌಡಗೆ ಸಿಜೆಎಂ ಕೋರ್ಟ್ ನ್ಯಾಯಾಧೀಶರು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ (Judicial custody) ಒಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದಿದ್ದರು .ಕಾನೂನು ಬಾಹಿರವಾಗಿ ಮಗುವನ್ನ ದತ್ತು ತೆಗೆದುಕೊಂಡು ಪೊಲೀಸ್ ವಶದಲ್ಲಿದ್ದ ಸೋನು ಶ್ರೀನಿವಾಸ ಗೌಡರನ್ನು (Sonu Srinivas Gowda) ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಿದ್ದರು. ಬಾಲಕಿ ಚಿಕ್ಕಪ್ಪನ ಮನೆಗೆ ಬಂದ ಪೊಲೀಸರು ಕೆಲವೇ ಕ್ಷಣದಲ್ಲಿ ಮಾಹಿತಿ ಕಲೆಹಾಕಿದ್ದರು. ಈ ವೇಳೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸೋನು ಗೌಡ ಇದ್ದ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದ ಪ್ರಸಂಗವೂ ನಡೆದಿತ್ತು.
ಸ್ಥಳ ಮಹಜರು ಮಾಡಲು ಪೋಲಿಸರು ಭೇಟಿ ನೀಡಿದ ಬಳಿಕ ಸೋನು ಗೌಡ ಜೊತೆ ಮಾತನಾಡಬೇಕು ಅಂತ ಗ್ರಾಮಸ್ಥರು ಗಲಾಟೆ ಮಾಡಿರುವ ಬಗ್ಗೆ ವರದಿಯಾಗಿದೆ. ಪೊಲೀಸ್ ಕಾರಿಗೆ ಮುತ್ತಿಗೆ ಹಾಕಿ ಸೋನು ಗೌಡರನ್ನು ನೋಡಲು ನೂಕುನುಗ್ಗಲು ಮಾಡಿದರು. ಗ್ರಾಮಸ್ಥರು ಹಾಗೂ ಬಾಲಕಿ ಸಂಬಂಧಿಕರಿಂದ ಮಾಹಿತಿ ಪಡೆದ ಪೊಲೀಸರು ಸುಮಾರು ಇಪ್ಪತ್ತು ನಿಮಿಷಗಳಲ್ಲಿ ಸ್ಥಳ ಮಹಜರು ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳಿದ್ದರು.