ನ್ಯೂಸ್ ನಾಟೌಟ್: ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆ ಹಾಗೂ ಅದರ ಸಂಸ್ಥಾಪಕರಾದ ಬಾಬಾ ರಾಮ್ದೇವ್ (Baba Ramdev)ಗೆ ಸುಪ್ರೀಂ ಕೋರ್ಟ್ (Supreme Court) ಚಾಟಿ ಬೀಸಿದೆ. ಕ್ಷಮೆಯಾಚನೆಯ ಜಾಹೀರಾತು ಪ್ರಕಟಿಸಬೇಕು ಎಂದು ಸೂಚಿಸಿತ್ತು, ಸಣ್ಣ ಕಾಲಂ ನಲ್ಲಿ ಜಾಹೀರಾತು ಪ್ರಕಟಿಸಿದ್ದಕ್ಕೆ ಕೋರ್ಟ್ ‘ನೀವು ಉತ್ಪನ್ನದ ಜಾಹೀರಾತು ನೀಡಿದ್ದ ಗಾತ್ರದಲ್ಲೇ ಮತ್ತೆ ಕ್ಷಮೆಯಾಚಿಸುವ ಜಾಹಿರಾತು ನೀಡಬೇಕು’ ಎಂದಿತ್ತು.
ಅದರಂತೆ ಯೋಗ ಗುರು ಬಾಬಾ ರಾಮ್ದೇವ್ ಮತ್ತು ಅವರ ಸಹಾಯಕ ಬಾಲಕೃಷ್ಣ ಇಂದು (ಏಪ್ರಿಲ್ 24) ಪತ್ರಿಕೆಗಳಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವ ಜಾಹೀರಾತು ಪ್ರಕಟಿಸಿದ್ದಾರೆ. ಪತಂಜಲಿ ನಿನ್ನೆ ಕೂಡ ಕ್ಷಮೆಯಾಚಿಸಿ ಜಾಹೀರಾತು ನೀಡಿತ್ತು. ಆದರೆ ಅದರ ಗಾತ್ರವು ಅದರ ಔಷಧಗಳ ದಾರಿತಪ್ಪಿಸುವ ಜಾಹೀರಾತುಗಳಷ್ಟು ದೊಡ್ಡದಾಗಿದೆಯೇ ಎಂದು ನ್ಯಾಯಾಲಯ ಕೇಳಿತ್ತು. ಇಂದು ಬೆಳಿಗ್ಗೆ ಪ್ರಕಟವಾದ ಜಾಹೀರಾತು ಪತ್ರಿಕೆಯ ಪುಟದ ನಾಲ್ಕನೇ ಒಂದು ಭಾಗವನ್ನು ಒಳಗೊಂಡಿದೆ ಮತ್ತು ʼಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚನೆʼ ಎಂಬ ಶೀರ್ಷಿಕೆಯನ್ನು ಹೊಂದಿದೆ.
ಭಾರತದ ಸುಪ್ರೀಂ ಕೋರ್ಟ್ ನಿರ್ದೇಶನಗಳು / ಆದೇಶಗಳ ಅನುಸರಣೆ ಅಥವಾ ಅವಿಧೇಯತೆಗಾಗಿ ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ರಾಮ್ದೇವ್ ಮತ್ತು ಬಾಲಕೃಷ್ಣ ವೈಯಕ್ತಿಕವಾಗಿ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆ ಪರವಾಗಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಪತಂಜಲಿ ಸಂಸ್ಥಾಪಕರಾದ ಯೋಗ ಗುರು ರಾಮ್ದೇವ್ ಮತ್ತು ಸಹಾಯಕ ಬಾಲಕೃಷ್ಣ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ಕಂಪೆನಿಯ ಉತ್ಪನ್ನಗಳು ಗುಣಪಡಿಸುತ್ತವೆ ಎಂದು ಸಾರುವ ಜಾಹೀರಾತುಗಳನ್ನು ಪ್ರಕಟಿಸಿದ್ದರು. ಇದನ್ನು ಪ್ರಶ್ನಿಸಿ ವೈದ್ಯಕೀಯ ಸಂಘ ಕೋರ್ಟ್ಗೆ ಹೋಗಿತ್ತು. ನ್ಯಾಯಾಲಯವು ಈ ಹಿಂದೆ ರಾಮ್ದೇವ್ ಮತ್ತು ಬಾಲಕೃಷ್ಣ ಸಲ್ಲಿಸಿದ್ದ ಕ್ಷಮೆ ಅರ್ಜಿಯನ್ನು ತಿರಸ್ಕರಿಸಿತ್ತು. “ಅದು ಹೃದಯಪೂರ್ವಕವಾಗಿಲ್ಲ” ಎಂದು ಪೀಠ ಹೇಳಿತ್ತು.