ನ್ಯೂಸ್ ನಾಟೌಟ್: ಸಾರ್ವಜನಿಕ ಪ್ರದೇಶದಲ್ಲಿ 16 ವರ್ಷದ ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ 15 ವರ್ಷ ವಯಸ್ಸಿನ ಬಾಲಾಪರಾಧಿಯೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಮಥುರಾ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣ ಪೊಲೀಸರ ಬದಲಿಗೆ ಅಲ್ಲಿನ ಪಂಚಾಯ್ತಿ ತೀರ್ಮಾಣ ನೀಡಿದೆ. ಪಂಚಾಯ್ತಿ ಕಟ್ಟೆ ಏರಿ, ಯುವಕ 10 ಬಾರಿ ತನ್ನ ತಲೆಯ ಮೇಲೆ ತನ್ನದೇ ಚಪ್ಪಲಿಯಿಂದ ಹೊಡೆದುಕೊಳ್ಳುವಂತೆ ಪಂಚಾಯ್ತಿ ತೀರ್ಮಾನ ನೀಡಿದೆ.
ತೋಳಿನಲ್ಲಿ ಪುಟ್ಟ ಮಗುವನ್ನು ಹಿಡಿದುಕೊಂಡಿದ್ದ ಬಾಲಕಿಯನ್ನು ಆರೋಪಿ ಬಾಲಕ ಹಿಂದಿನಿಂದ ಬಂದು ತಬ್ಬಿಕೊಂಡಿದ್ದಾನೆ. ಬಾಲಕಿಯ ಚೀರಾಟ ಕೇಳಿ ಸ್ಥಳೀಯರು ಮತ್ತು ಕುಟುಂಬದ ಇತರರು ಆಕೆಯ ರಕ್ಷಣೆಗೆ ಧಾವಿಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಈ ಪ್ರಕರಣ ಪಂಚಾಯ್ತಿದಾರರ ಬಳಿಗೆ ಬಂದಾಗ, ಆರೋಪಿ ಯುವಕ ಬಾಲಕಿಯ ಕ್ಷಮೆ ಯಾಚಿಸಬೇಕು ಮತ್ತು ತನ್ನದೇ ಚಪ್ಪಲಿಯಿಂದ 10 ಬಾರಿ ತಲೆಯ ಮೇಲೆ ಹೊಡೆದುಕೊಳ್ಳಬೇಕು ಎಂಬ ವಿಚಿತ್ರ ತೀರ್ಮಾನ ನೀಡಿದೆ. ಬಳಿಕ ಆರೋಪಿಯನ್ನು ಬಿಟ್ಟಿದ್ದಾರೆ.
ಈ ವಿಡಿಯೊಗಳನ್ನು ಪರಿಗಣಿಸಿದ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 294ರಡಿ ಪ್ರಕರಣ ದಾಖಲಿಸಿದ್ದಾರೆ. ಬಾಲನ್ಯಾಯ ಮಂಡಳಿಯ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.