ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆ ಬಿರು ಬಿಸಿಲಿನಿಂದ ಕುದಿಯುತ್ತಿದೆ. ಹಳ್ಳ ಕೊಳ್ಳ ತೊರೆ ನದಿಗಳು ಬತ್ತಿ ಹೋಗುತ್ತಿವೆ. ಹನಿ ನೀರಿಗಾಗಿ ಜನ ತತ್ತರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಹಲವಾರು ಕೃಷಿಕರ ಜೀವನಾಡಿಯಾಗಿರುವ ನೇತ್ರಾವತಿ ನದಿಯಲ್ಲಿ ನೀರು ಬತ್ತಿ ಹೋಗಿದೆ. ಉಪ್ಪಿನಂಗಡಿ ಸಮೀಪದ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಅಣೆಕಟ್ಟೆಯ ನೀರನ್ನು ಹರಿಯಬಿಡಲಾಗಿದೆ. ಸಂಗ್ರಹವಾಗಿದ್ದ ಹಿನ್ನೀರಿನಿಂದ ಕಂಗೊಳಿಸುತ್ತಿದ್ದ ನೇತ್ರಾವತಿ ನದಿಯ ಒಡಲು ಒಂದೇ ದಿನದಲ್ಲಿ ಬರಿದಾಗಿದೆ. ಇದರಿಂದಾಗಿ ಈ ಭಾಗದ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಬುಧವಾರದವರೆಗೆ ಅಣೆಕಟ್ಟೆಯಲ್ಲಿ 4 ಮೀಟರ್ ವರೆಗೆ ಹಲಗೆ ಹಾಕಲಾಗಿತ್ತು. ವಿಪರೀತ ಬಿಸಿಲಿನಿಂದ ನೀರು ಆವಿಯಾಗುತ್ತಿತ್ತು. ಈ ನಡುವೆ ಅಣೆಕಟ್ಟೆಯಲ್ಲಿ 3.7 ಮೀಟರ್ ವರೆಗೆ ನೀರಿನ ಸಂಗ್ರಹವಿತ್ತು. ಗುರುವಾರ ಒಂದೇ ದಿನ 2.1 ಮೀಟರ್ನಷ್ಟು ನೀರನ್ನು ಹರಿಯ ಬಿಡಲಾಗಿದೆ. ಇದರಿಂದಾಗಿ ನದಿಯ ಒಡಲು ಬರಿದಾಗಿದೆ. ಜನರಲ್ಲಿ ಆತಂಕ ವ್ಯಕ್ತವಾಗಿದೆ.
ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಈ ಕಾರಣಕ್ಕೆ ಎಎಂಆರ್ ಅಣೆಕಟ್ಟಿನಿಂದ ನೀರು ಬಿಡಲಾಗಿತ್ತು. ಇದರ ಪರಿಣಾಮ ಸರಪಾಡಿ ಹಾಗೂ ಕಡೇಶ್ವಾಲ್ಯದಲ್ಲಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಣೆಕಟ್ಟೆ ಬರಿದಾಗತೊಡಗಿತ್ತು. ಜನರಿಗೆ ನೀರು ಒದಗಿಸಲು ಸಮತೋಲನ ಜಲಾಶಯವಾಗಿ ಪರಿಗಣಿಸಿರುವ ಬಿಳಿಯೂರು ಅಣೆಕಟ್ಟೆಯಿಂದ ನೀರು ಒದಗಿಸುವ ಅನಿರ್ವಾಯತೆಗೆ ಒಳಗಾದ ಸಣ್ಣ ನೀರಾವರಿ ಇಲಾಖೆ ನೀರು ಬಿಡುವ ಕ್ರಮ ಕೈಗೊಂಡಿದೆ. ಗುರುವಾರ ಸಂಜೆ ಗೇಟ್ಗಳನ್ನು ಮತ್ತೆ ಅಳವಡಿಸಲಾಗಿದ್ದು, ಪ್ರಸಕ್ತ ಬಿಳಿಯೂರು ಅಣೆಕಟ್ಟಿನಲ್ಲಿ 1.6 ಮೀಟರ್ ವರೆಗೆ ಮಾತ್ರ ನೀರಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಅನಿವಾರ್ಯತೆ ಉಂಟಾದರೆ ಅದನ್ನೂ ಬಿಟ್ಟುಕೊಡುವ ಸ್ಥಿತಿ ಉದ್ಭವಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದು ಸಹಜವಾಗಿಯೇ ಕೃಷಿಕರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.