ನ್ಯೂಸ್ ನಾಟೌಟ್: ಲೋಕ ಸಭಾ ಚುನಾವಣೆ ಕರ್ನಾಟಕದಲ್ಲಿ ಮೊದಲ ಹಂತದ ಯಶಸ್ವಿಯಾಗಿ ನಡೆದಿದೆ. ಈ ಬೆನ್ನಲ್ಲೇ ಒಕ್ಕಲಿಗ ನಾಯಕರ ಚಿತ್ತ ಹಳೆ ಮೈಸೂರಿನ ಕಡೆ ಹೊರಳಿದೆ. ಈ ನಡುವೆ ಸಮುದಾಯದ ನಾಯಕರ ಪರಸ್ಪರ ರಾಜಕೀಯ ಕೆಸರೆರಚಾಟ, ಟೀಕೆಗಳ ಸುರಿಮಳೆ ನಡೆದಿದೆ. ಒಕ್ಕಲಿಗ ನಾಯಕರಾದ ಉಪ ಮುಖ್ಯಮಂತ್ರಿ ಡಿ.ಕೆ ಶಿವ ಕುಮಾರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಚೆಲುವರಾಯ ಸ್ವಾಮಿ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ.
ಮಾಧ್ಯಮಗಳ ಮುಂದೆ ಮಾತನಾಡಿರುವ ಸಚಿವ ಚೆಲುವರಾಯ ಸ್ವಾಮಿ, ‘ಶ್ರೀ ನಿರ್ಮಲನಂದನಾಥ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿಸಿದ್ದು ಯಾರು..? ಜೆಡಿಎಸ್ ಸರ್ಕಾರ ಅಲ್ವಾ..? ಇದನ್ನು ಮಾಡಿಸಿದ್ದು ಯಾಕೆ..? ಇದಕ್ಕಿಂತ ದೊಡ್ಡ ಅಪಚಾರ ಒಕ್ಕಲಿಗರ ಪೀಠಕ್ಕೆ ಬೇಕಾ..? ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಮಂಡ್ಯ ಲೋಕ ಸಭಾ ಕ್ಷೇತ್ರದಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಪಕ್ಷದಿಂದ ಸ್ಪರ್ಧೆಗಿಳಿದಿರುವ ಅವರು ಬಹಳಷ್ಟು ತೀಕ್ಷ್ಣ ಪದಗಳಿಂದ ಹಾಲಿ ಉಪ ಮುಖ್ಯಮಂತ್ರಿ ಡಿಕೆ ಶಿವ ಕುಮಾರ್ ವಿರುದ್ಧ ಗುಡುಗಿದ್ದಾರೆ. ‘ನಾನು ಯಾರ ಫೋನ್ ಟ್ಯಾಪಿಂಗ್ ಮಾಡಲಿಲ್ಲ. ಅಂತಹ ಉದ್ದೇಶ ನನಗಿಲ್ಲ. ನನ್ನ ಮೇಲೆ ಅಪಪ್ರಚಾರ ಮಾಡಿಕೊಂಡು ಕೆಲವರು ಯಶಸ್ಸು ಸಾಧಿಸುವ ಹುನ್ನಾರ ನಡೆಸುತ್ತಿದ್ದಾರೆ. ಡಿಕೆಶಿ ಕೊತ್ವಾಲ್ ನಂತಹ ರೌಡಿ ಜೊತೆ ಇದ್ದವರು. ಅವರಿಗೆ ಸ್ಟ್ರೀಟ್ ರಾಜಕಾರಣ ನಡೆಸಿಯೇ ಅಭ್ಯಾಸ. ಅವರು ಜನಪರವಾಗಿ ಸದನದಲ್ಲಿ ಮಾತನಾಡುವುದಿಲ್ಲ ಎಂದು ಕುಮಾರ ಸ್ವಾಮಿ ಕಿಡಿಕಾರಿದ್ದಾರೆ. ಇದಕ್ಕೆ ಉತ್ತರಿಸಿರುವ ಡಿಕೆ ಶಿವ ಕುಮಾರ್ ಅವರು ‘ ನನ್ನ ಹತ್ರ ಸಾಕ್ಷಿ ಇದೆ. ಸಮಯ ಬಂದಾಗ ನಾನು ಅದನ್ನು ತೋರಿಸುತ್ತೇನೆ’ ಎಂದಿದ್ದಾರೆ. ಒಟ್ಟಿನಲ್ಲಿ ಒಕ್ಕಲಿಗ ನಾಯಕರ ನಡುವಿನ ಸಮರ ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆಗೂ ಮುನ್ನ ಭಾರಿ ಚರ್ಚೆಗೆ ಕಾರಣವಾಗಿದೆ. ಇದರಿಂದೇನಾದರೂ ಒಕ್ಕಲಿಗರ ಮತ ಒಡೆದು ಹೋಗಬಹುದೇ..? ಇದರ ಲಾಭ ಯಾರಿಗೆ..? ಅನ್ನೋದನ್ನ ಕಾದು ನೋಡಬೇಕಿದೆ.