ನ್ಯೂಸ್ ನಾಟೌಟ್: ಮಾನಸಿಕ ಅಸ್ವಸ್ಥ 15 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದರಿಂದ ಆಕೆ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ 44 ವರ್ಷದ ವ್ಯಕ್ತಿಯೊಬ್ಬನಿಗೆ ಕೇರಳ ನ್ಯಾಯಾಲಯವು ಸೋಮವಾರ ವಿವಿಧ ಪ್ರಕರಣಗಳ ಅಡಿಯಲ್ಲಿ ಒಟ್ಟು 106 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ದೇವಿಕುಲಂ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿರಾಜುದ್ದೀನ್ ಪಿ.ಎ. ಅವರು ಸಂತ್ರಸ್ತೆಯ ತಾಯಿಯ ಸ್ನೇಹಿತನಾಗಿದ್ದ ವ್ಯಕ್ತಿಗೆ ಒಟ್ಟು 106 ವರ್ಷಗಳ ಕಾಲ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ವಿವಿಧ ಶಿಕ್ಷೆಗಳನ್ನು ವಿಧಿಸಿದ್ದಾರೆ ಎನ್ನಲಾಗಿದೆ.
ಆರೋಪಿಯು ದಂಡವನ್ನು ಪಾವತಿಸಿದರೆ ಇಡುಕ್ಕಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂತ್ರಸ್ತ ಪರಿಹಾರ ಯೋಜನೆಯಿಂದ ಬಾಲಕಿಗೆ ಪರಿಹಾರವಾಗಿ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. 2022ರಲ್ಲಿ ತ್ರಿಶೂರ್ ಮೂಲದ ಆರೋಪಿ ಕೆಲಸದ ನಿಮಿತ್ತ ಅಡಿಮಾಲಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಹುಡುಗಿಯ ತಾಯಿಯೊಂದಿಗೆ ಹೊಟೇಲ್ ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಈತ ಆಕೆಯ ಜೊತೆ ಸ್ನೇಹ ಬೆಳೆಸಿದ ಅನಂತರ ಆಕೆಯ ಮನೆಯಲ್ಲಿಯೇ ಇದ್ದ ಮಾನಸಿಕ ಅಸ್ವಸ್ಥ ಬಾಲಕಿಯ ಲೈಂಗಿಕವಾಗಿ ಬಳಸಿಕೊಂಡು ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಆರೋಗ್ಯ ತೊಂದರೆಯಿಂದಾಗಿ ತಾಯಿ ಬಾಲಕಿಯನ್ನು ಆದಿಮಾಲಿ ತಾಲೂಕು ಆಸ್ಪತ್ರೆಗೆ ಕರೆತಂದಾಗ ಬಾಲಕಿ ಗರ್ಭಿಣಿ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ಕುರಿತು ವೈದ್ಯರು ಪೊಲೀಸರಿಗೆ ದೂರು ನೀಡಿದ್ದರು.