ನ್ಯೂಸ್ ನಾಟೌಟ್: ಏ. 3ರಂದು ಕೊಳವೆ ಬಾವಿಗೆ ಬಿದ್ದು, ಸತತ 20 ಗಂಟೆಗಳ ಕಾರ್ಯಾಚರಣೆಯ ಬಳಿಕ ಬದುಕಿ ಬಂದ ಸಾತ್ವಿಕ್ (2 ವರ್ಷ)ನನ್ನು ಅಪ್ಪಿ ಮುದ್ದಾಡಿದ ತಂದೆಗೀಗ ಸಂಕಷ್ಟ ಎದುರಾಗಿದೆ. ಈ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ನಡೆದಿತ್ತು. ಬೋರೆವೆಲ್ ಇದ್ದ ಜಮೀನು ಅವರದ್ದೇ ಆಗಿರುವುದರಿಂದ ತೆರೆದ ಬೋರ್ ವೆಲ್ ಮುಚ್ಚುವ ಪ್ರಯತ್ನ ಮಾಡದೇ ಇರುವುದಕ್ಕಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಜೊತೆಗೆ, ಎನ್ ಡಿಆರ್ ಎಫ್ ಕಾರ್ಯಾಚರಣೆಯಿಂದಾಗಿ ಜಮೀನಿನಲ್ಲಿ ದೊಡ್ಡ ಕಂದಕ ಸೃಷ್ಟಿಯಾಗಿದ್ದು ಅದನ್ನು ಮುಚ್ಚಿಸಲು ಬೇಕಾದ ಲಕ್ಷಾಂತರ ರೂ.ಗಳನ್ನು ಹೊಂದಿಸುವುದು ಹೇಗೆ ಎಂಬುದು ಸಾತ್ವಿಕ್ ನ ಬಡ ರೈತಾಪಿ ಕುಟುಂಬ ಚಿಂತೆಯಾಗಿದೆ. ಕೊಳವೆ ಬಾವಿಯಿಂದ ಮಗುವನ್ನು ಹೊರತಗೆಯಲು ಜಮೀನಿನಲ್ಲಿ ಸುಮಾರು 20 ಅಡಿ ತಗ್ಗು ತೋಡಲಾಗಿದೆ. ಇದನ್ನು ಮುಚ್ಚಲು ಈಗ ಈ ಬಡಕುಟುಂಬಕ್ಕೆ ಲಕ್ಷಾಂತರ ರೂ. ಬೇಕಿದೆ.
ಬಡತನದಲ್ಲಿರುವ ರೈತಾಪಿ ಕುಟುಂಬ ಇಷ್ಟು ಹಣವನ್ನು ಎಲ್ಲಿಂದ ತರುವುದು ಎಂದು ಪೇಚಿಗೆ ಸಿಲುಕಿದೆ. ಜಮೀನು ಇರುವುದು ಎರಡೂವರೆ ಎಕರೆ, ಹೊಲದಲ್ಲಿ ಅಗೆದ ಮಣ್ಣನ್ನು ಹಾಗೆಯೇ ಗುಡ್ಡೆ ಹಾಕಲಾಗಿದೆ. ಗುಂಡಿ ಬಿದ್ದಿರುವುದು ಹಾಗೂ ಮಣ್ಣು ಗುಡ್ಡೆ ಹಾಗಿರುವ ಪ್ರದೇಶ ಸುಮಾರು ಒಂದೂವರೆ ಎಕರೆಯಷ್ಟಿದೆ ಎಂದು ವರದಿ ತಿಳಿಸಿದೆ. ಇದರ ಹೊರತಾಗಿ, ಬೋರ್ ವೆಲ್ ತೋಡಿದ ನಂತರ ಅದನ್ನು ಮುಚ್ಚದೆ ಹಾಗೇ ಬಿಟ್ಟಿರುವ ಜಮೀನು ಮಾಲೀಕ ಹಾಗೂ ಬೋರ್ ವೆಲ್ ಏಜೆನ್ಸಿ ಮೇಲೆಯೂ ಎಫ್ಐಆರ್ ದಾಖಲಿಸಲು ಜಿಲ್ಲಾಡಳಿತ ಸೂಚಿಸಿದೆ.