ನ್ಯೂಸ್ ನಾಟೌಟ್: ನನ್ನ ಹೇಳಿಕೆಯಿಂದ ನೇಹಾ ತಂದೆ – ತಾಯಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಎಬಿವಿಪಿ ಕಾರ್ಯಕರ್ತರಿಂದ ಮನೆಗೆ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಸತ್ಯಾಸತ್ಯತೆ ಗೊತ್ತಿಲ್ಲ. ಬಿಜೆಪಿ ರಾಜಕೀಯ ಮಾಡಲು ಹೋಗಿದ್ದಾರೆ. ನಮಗೆ ಜವಾಬ್ದಾರಿ ಇದೆ. ಅದರ ಬಗ್ಗೆ ತನಿಖೆ ಆಗುತ್ತೆ ಅಲ್ವಾ? ಬಂದ ವರದಿಯನ್ನ ನಾವು ತಿಳಿಸಿದ್ದೇವೆ. ನನ್ನ ಹೇಳಿಕೆಯಿಂದ ನೇಹಾ ತಂದೆ-ತಾಯಿಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುವೆ ಎಂದು ಹೇಳಿದ್ದಾರೆ.
ನೇಹಾ ಹಿರೇಮಠ ಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವರು ನಿನ್ನೆ ನೀಡಿದ್ದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ನೇಹಾ ಹಾಗೂ ಫಯಾಜ್ ಪ್ರೀತಿಸುತ್ತಿದ್ದರು. ನಂತರ ನೇಹಾ ಫಯಾಜ್ ನಿಂದ ದೂರಾಗಲು ಯತ್ನಿಸಿದ್ದಾಳೆ. ಹೀಗಾಗಿ ಕೊಲೆ ನಡೆದಿದೆ. ಇದು ಆಕಸ್ಮಿಕ ಘಟನೆ ಎಂದು ಹೇಳಿದ್ದರು. ಗೃಹ ಸಚಿವರ ಹೇಳಿಕೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೂಡ ಯಾವುದೇ ಮರ್ಡರ್ ವೈಯಕ್ತಿಕ ಕಾರಣಗಳಿಗಾಗಿಯೂ ನಡೆಯುತ್ತದೆ ಎಂದಿದ್ದರು. ಗೃಹ ಸಚಿವರು ಹಾಗೂ ಸಿಎಂ ಹೇಳಿಕೆಗೆ ತೀವ್ರ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿತ್ತು.
ರಾಜ್ಯಕ್ಕೆ ಮೋದಿ ಆಗಮನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೋದಿ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಮುಂದೇನು ಕೂಡ ಬರ್ತಾರೆ. ನಾವು ಅನೇಕ ಪ್ರಶ್ನೆ ಕೇಳಿದ್ದೇವೆ. ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದೀರಾ ಎಂದು ಕೇಳಿದ್ದೇವೆ. GST ಷೇರ್ ಎಷ್ಟು ಕೊಟ್ಟಿದ್ದೀರಿ? ಭೀಕರ ಬರಗಾಲ ಇತ್ತು, ವಿಶೇಷ ಅನುದಾನ ಕೊಟ್ಟಿಲ್ಲ. 18 ಸಾವಿರ ಕೋಟಿ ಬರ ಪರಿಹಾರ ಪ್ರಸ್ತಾವನೆ ಇಡಲಾಗಿತ್ತು, ಅದನ್ನು ಕೊಟ್ಟಿಲ್ಲ. ಯಾವುದೇ ಹೊಸ ಯೋಜನೆ ಕೊಟ್ಟಿಲ್ಲ. ಭದ್ರ ಮೇಲ್ಡಂಡೆ ಯೋಜನೆಗೆ ಯಾವುದೇ ಸಹಕಾರ ಕೊಟ್ಟಿಲ್ಲ ಎಂದರು. ಇದಕ್ಕೂ ಮುನ್ನ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ಹೇಳಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ ನಡೆಸಿತು. ಸದಾಶಿವನಗರದ ಗೃಹ ಸಚಿವರ ಸರ್ಕಾರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಮುತ್ತಿಗೆಗೆ ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮುತ್ತಿಗೆಗೆ ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.