ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿಗಳ ಹೇಳಿಕೆಯನ್ನು ಟೀಕಿಸಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಬಿಕಾನೇರ್ ನ ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಜಿಲ್ಲಾಧ್ಯಕ್ಷ ಉಸ್ಮಾನ್ ಘನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ರಾಜಸ್ತಾನದ ಬಾನಸ್ವರಾದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ ಪ್ರಧಾನಿ ಮೋದಿಯವರು ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿತ್ತು. ಇದೀಗ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದ ಮುಕ್ತ ಪ್ರಸಾದ್ ನಗರ ಪೊಲೀಸ್ ಠಾಣಾಧಿಕಾರಿ ಧೀರೇಂದ್ರೆ ಶೆಖಾವತ್, ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ದಿನವೇ ಅವರ ಬಂಧನಕ್ಕೆ ನಾವು ತೆರಳಿದ್ದೆವು.
ಆದರೆ ಅವರು ದಿಲ್ಲಿಯಲ್ಲಿದ್ದರು. ಶನಿವಾರ ಅವರು ವಾಪಾಸ್ಸಾಗ್ತಿದ್ದಂತೆ ಅವರು ನೇರವಾಗಿ ಠಾಣೆಗೆ ಬಂದು ತಮ್ಮ ಬಂಧನಕ್ಕೆ ಪೊಲೀಸ್ ವಾಹನ ಕಳುಹಿಸಲು ನಿಮಗೆಷ್ಟು ಧೈರ್ಯ ಎಂದು ತಗಾದೆ ತೆಗೆದಿದ್ದರು. ನಮಗೆ ಅವರು ಯಾರೆಂಬುದೇ ಗೊತ್ತಿರಲಿಲ್ಲ. ಪೊಲೀಸ್ ಠಾಣೆಯ ಎದುರು ತಮ್ಮ ನೂರಾರು ಬೆಂಬಲಿಗರ ಜೊತೆಗೆ ಬಂದಿದ್ದ ಉಸ್ಮಾನ್ ಘನಿ, ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದರು. ಪೊಲೀಸ್ ಠಾಣೆ ಎದುರು ನಡೆಯುತ್ತಿದ್ದ ಹೈಡ್ರಾಮಾ ತಾರಕಕ್ಕೇರುತ್ತಿದ್ದಂತೆ ನಾವು ಅವರನ್ನು ಬಂಧಿಸಿದ್ದೇವೆ. ಅಲ್ಲದೇ ಸೆಕ್ಷನ್ 151 (ಶಾಂತಿ ಕದಲುವ ಯತ್ನ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಅವರನ್ನು ಹಾಜರು ಪಡಿಸುತ್ತೇವೆ ಎಂದು ಮಾಹಿತಿ ಕೊಟ್ಟರು.
ಪತ್ರಕರ್ತರ ಜೊತೆ ಮಾತನಾಡುತ್ತಾ ಮುಸ್ಲಿಮರ ಬಳಿ ಹೋಗಿ ಬಿಜೆಪಿಗೆ ಮತ ನೀಡುವಂತೆ ಕೇಳೋಕೆ ಹೋದರೆ ಅವರು ಪ್ರಧಾನಿ ಮೋದಿ ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆಗಳ ಕುರಿತು ಕೇಳುತ್ತಾರೆ. ಅವರಿಗೆ ಕೊಡಲು ನನ್ನ ಬಳಿ ಉತ್ತರ ಇಲ್ಲ. ಅಲ್ಲದೇ ರಾಜಸ್ಥಾನದಲ್ಲಿ ಜಾಟ್ ಸಮುದಾಯ ಕೂಡ ಬಿಜೆಪಿ ವಿರುದ್ಧ ಕೋಪಗೊಂಡಿದೆ. ಚುರು ಮತ್ತು ಇತರೆ ಲೋಕಸಭಾ ಕ್ಷೇತ್ರಗಳಲ್ಲಿ ಜಾಟ್ ಸಮುದಾಯಗಳು ಬಿಜೆಪಿ ವಿರುದ್ಧ ಮತ ಚಲಾಯಿಸಿದೆ. ನನ್ನ ಈ ಹೇಳಿಕೆಗೆ ನನ್ನ ವಿರುದ್ಧ ಕ್ರಮ ಜರುಗಿಸಿದರೂ ತಲೆಗೆಡಿಸಿಕೊಳ್ಳಲ್ಲ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.