ನ್ಯೂಸ್ ನಾಟೌಟ್: ಖುಷಿ ಖುಷಿಯಾಗಿ ಅಪ್ಪ-ಅಮ್ಮನಿಗೆ ‘ಸಂಜೆ ಸಿಗ್ತೀನಿ..’ ಅಂತ ಮನೆಯಿಂದ ಹೇಳಿ ಬಂದಿದ್ದಳು ಮಗಳು. ಆದರೆ ಇಂದು ತಾನು ಕೆಲಸ ಮಾಡುತ್ತಿರುವ ಆಸ್ಪತ್ರೆಯ causality ವಿಭಾಗಕ್ಕೇ ತನ್ನ ತಂದೆಯ ಶವ ಬರುತ್ತದೆ ಎಂದು ಆ ಮಗಳು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಅಂತಹ ಒಂದು ದುರ್ಘಟನೆ ನಡೆದೇ ಹೋಗಿ ಬಿಟ್ಟಿದೆ ಅನ್ನೋದು ನೋವಿನ ಸಂಗತಿ. ಮೃತಪಟ್ಟ ವಿನಾಯಕ ಮೂರ್ತಿ ಶವವನ್ನು ಹಠಾತ್ ಕಂಡು ಮಗಳು ನಿರಂಜಿನಿ ಮಮ್ಮಲ ಮರುಗಿದಳು. ನಿರಂಜಿನಿ ಬಿಕ್ಕಿ-ಬಿಕ್ಕಿ ಅಳುವಾಗ ನೆರೆದಿದ್ದ ವೈದ್ಯರು, ನರ್ಸ್ , ಸಿಬ್ಬಂದಿ ಕಣ್ಣಾಲಿಗಳು ತೇವಗೊಂಡವು.
ಮಗಳ ಹೆಸರು ನಿರಂಜಿನಿ. ಈಕೆ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಎಮರ್ಜನ್ಸಿ ಮೆಡಿಸಿನ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯ causality ವಿಭಾಗಕ್ಕೆ ಹೊಂದಿಕೊಂಡಿರುವ ಎಮರ್ಜೆನ್ಸಿ ಮೆಡಿಸಿನ್ ವಿಭಾಗ ಅಂದ ಮೇಲೆ ಪ್ರತಿ ನಿತ್ಯ ಅಪಘಾತ ಪ್ರಕರಣಗಳು ಬರೋದು ಸಾಮಾನ್ಯ. ಯಾವುದೇ ಪೇಷೆಂಟ್ ಅನ್ನು ಆಂಬ್ಯುಲೆನ್ಸ್ ನಲ್ಲಿ causality ವಿಭಾಗಕ್ಕೆ ತಂದರೂ ಅಲ್ಲಿನ ಸಿಬ್ಬಂದಿ ಫುಲ್ ಅಲರ್ಟ್ ಆಗ್ತಾರೆ. ಬಂದಿರುವ ರೋಗಿಗೆ ತುರ್ತು ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಮಾಡ್ತಾರೆ. ಅಂತೆಯೇ ಅಜ್ಜಾವರದಲ್ಲಿ ನಡೆದಿದ್ದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿನಾಯಕ ಮೂರ್ತಿ ಮೃತ ದೇಹವನ್ನು ತೆಗೆದುಕೊಂಡು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ causality ವಿಭಾಗಕ್ಕೆ ತರಲಾಯಿತು. ಯಾವುದೋ ಪೇಷೆಂಟ್ ಇರಬೇಕೆಂದು ಸಿಬ್ಬಂದಿಗಳೆಲ್ಲರು ತುರ್ತಾಗಿ ಆಂಬ್ಯುಲೆನ್ಸ್ ಬಳಿ ಬಂದರು. ಅಚ್ಚು ಪ್ರಗತಿಯವರ ಆಂಬ್ಯುಲೆನ್ಸ್ ನಲ್ಲಿ ಬಂದ ಆ ದೇಹವನ್ನು ವಾಹನದಿಂದ ಕೆಳಕ್ಕಿಳಿಸುವಾಗ ನೆತ್ತರು ಸೋರುತ್ತಿತ್ತು.
ಮಗಳಿಗೆ ಇದು ತಂದೆಯ ದೇಹವೆನ್ನುವ ಗುರುತು ಕೂಡ ಸಿಗಲಿಲ್ಲ. ಅಷ್ಟರ ಮಟ್ಟಿಗೆ ದೇಹ ಜರ್ಜರಿತವಾಗಿತ್ತು. ಆರಂಭದಲ್ಲಿ ತಂದೆಯ ಗುರುತು ಸಿಗದಿದ್ದರೂ ನಂತರ ಈಕೆಗೆ ಇದು ತನ್ನ ತಂದೆಯೇ ಅನ್ನೋದು ಖಚಿತಗೊಂಡಿತು. ಮಗಳ ಆಕ್ರಂದನ ಮುಗಿಲು ಮುಟ್ಟಿತು. ಸುತ್ತಲು ಜನ ಸೇರಿದರು. ಏನಾಯಿತು ಅಂತ ಕೇಳಿದಾಗ ‘ಇವರು ನನ್ನ ತಂದೆ, ಅಯ್ಯೋ..ದೇವರೇ..’ ಅಂತ ನಿರಂಜಿನಿ ಕಣ್ಣೀರಿಟ್ಟ ಸ್ಥಿತಿ ನೆರೆದಿದ್ದವರ ಹೃದಯವನ್ನು ಭಾರವಾಗುವಂತೆ ಮಾಡಿತು. ಇಂತಹ ಸ್ಥಿತಿ ಶತ್ರುವಿಗೂ ಬಾರಬಾರದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.
ಸದ್ಯ ತಾಯಿ ಮಂಜುಳ ಕೂಡ ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮೂಲಗಳ ಪ್ರಕಾರ ಬೆನ್ನು ಮೂಳೆಗೆ ಗಂಭೀರ ಗಾಯವಾಗಿದೆ. ಆಕೆಯ ಜೀವಕ್ಕೆ ಏನು ಅಪಾಯ ಇಲ್ಲ ಎಂದು ಹೇಳಲಾಗುತ್ತಿದೆ. ಆಕೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು ಎಂದು ಎನ್ನಲಾಗುತ್ತಿದೆ. ಅಜ್ಜಾವರದಲ್ಲಿ ಇಂದು ಬೆಳಗ್ಗೆ ಜೀಪು-ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಮೇಲೆ ಜೀಪ್ ಉರುಳಿ ಬಿದ್ದುದರಿಂದ ಬೈಕ್ ನಲ್ಲಿದ್ದ ದಂಪತಿಗೆ ಗಂಭೀರ ಗಾಯವಾಗಿತ್ತು.