ನ್ಯೂಸ್ ನಾಟೌಟ್: ಮಂಗಳೂರಿನ ಚಿತ್ರ ಕಲಾವಿದನಿಗೆ ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯಿಂದ ಇದ್ದಕ್ಕಿದ್ದಂತೆ ಕರೆ ಬಂದಿದೆ. ನಿಮ್ಮ ಈ ಮೇಲ್ ಐಡಿ ಕೊಡಿ ಎಂದು ತಿಳಿಸಲಾಗಿದೆ. ಈ ಕರೆಯ ಬಳಿಕ ಚಿತ್ರ ಕಲಾವಿದ ಕಿರಣ್ ತೊಕ್ಕೊಟ್ಟು ಒಂದು ಘಳಿಗೆ ಶಾಕ್ ಆಗಿರುವುದಂತೂ ನಿಜ. ಇವರೊಬ್ಬ ಚಿತ್ರ ಕಲಾವಿದ. ಪ್ರತಿ ದಿನ ಹಲವಾರು ಚಿತ್ರಗಳನ್ನು ಬರೆಯುತ್ತಲೇ ಇರುತ್ತಾರೆ. ಅಂತೆಯೇ ಮೋದಿ ಮಂಗಳೂರಿಗೆ ಬರುವ ಮುನ್ನ ದಿನ ಪ್ರಧಾನಿ ಮೋದಿಯವರ ಚಿತ್ರವನ್ನು ತೈಲವರ್ಣದಲ್ಲಿ ರಚಿಸಿದ್ದರು. ಮೋದಿ ರ್ಯಾಲಿಯ ಸಮಯದಲ್ಲಿ ಅದನ್ನು ಹಿಡಿದುಕೊಂಡು ಕಿರಣ್ ನಿಂತಿದ್ದರು. ಈ ಸುಂದರ ಚಿತ್ರ ಮೋದಿಯ ಗಮನ ಸೆಳೆಯಿತು. ಪ್ರಧಾನಿ ಮೋದಿಯವರು ಭದ್ರತಾ ಸಿಬ್ಬಂದಿಗೆ ಸೂಚಿಸಿ ಚಿತ್ರವನ್ನು ಪಡೆದುಕೊಂಡಿದ್ದರು.
ಇದಕ್ಕೆ ಪ್ರತಿಯಾಗಿ ಬುಧವಾರ ಸಂಜೆ ಪ್ರಧಾನಿ ಕಚೇರಿಯಿಂದ ಕರೆ ಬಂದಿದೆ. ಇ ಮೇಲ್ ಐಡಿ ಮತ್ತು ವಿಳಾಸ ಪಡೆದುಕೊಂಡು ಮೇಲ್ ಕಳುಹಿಸಲಾಗಿದೆ. ಮೋದಿ ಅವರ ಸಹಿ ಇರುವ ಪತ್ರದಲ್ಲಿ ಕಿರಣ್ ಅವರ ಪ್ರತಿಭೆಯನ್ನು ಅಭಿನಂದಿಸಲಾಗಿದೆ.
‘ಅತ್ಯುತ್ತಮ ಕೌಶಲದಿಂದ ತಾವು ರಚಿಸಿದ ಚಿತ್ರವು ದೇಶದ ಯುವಶಕ್ತಿಯನ್ನು ಪ್ರತಿಬಿಂಬಿಸುತ್ತಿದೆ. ಪ್ರಗತಿಪರ ಭಾರತವನ್ನು ನಿರ್ಮಿಸಲು ಮತ್ತು ಯುವಜನರಿಗೆ ಪ್ರಗತಿಪರ ಭವಿಷ್ಯವನ್ನು ನೀಡಲು ಪ್ರಯತ್ನ ನಡೆಯುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಅಭಿಮಾನದ ಕಾಣಿಕೆಯು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ದೇಶಕ್ಕಾಗಿ ಇನ್ನಷ್ಟು ಹೆಚ್ಚು ಶ್ರಮದಿಂದ ಸೇವೆ ಸಲ್ಲಿಸಲು ನಾನು ಬದ್ಧನಾಗಿದ್ದೇನೆ’ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ. 2047ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶದ ಭವಿಷ್ಯ ಯುವಶಕ್ತಿಯ ಕೈಯಲ್ಲಿ ಭದ್ರವಾಗಿರುತ್ತದೆ ಎಂಬುದರ ಬಗ್ಗೆ ಸಂದೇಹವೇ ಬೇಡ ಎನ್ನುವುದನ್ನು ನಿಮ್ಮಂಥ ಉತ್ಸಾಹಿಗಳು ಸಾಬೀತು ಮಾಡಿದ್ದಾರೆ. ಭಾವನೆಗಳಿಗೆ ಇನ್ನಷ್ಟು ಬಣ್ಣ ತುಂಬಲು ನಿಮಗೆ ಸಾಧ್ಯವಾಗಲಿ, ಒಳಿತಾಗಲಿ’ ಎಂದು ಮೋದಿ ಹೇಳಿದ್ದಾರೆ.