ನ್ಯೂಸ್ ನಾಟೌಟ್: ಚೀನಾದ ತಾಳಕ್ಕೆ ಕುಣಿಯುತ್ತಿದ್ದರೂ ದ್ವೀಪ ರಾಷ್ಟ್ರ ಮಾಲ್ಡೀವ್ಸ್ಗೆ ಭಾರತ ನೆರವಿನ ಹಸ್ತ ನೀಡುವುದನ್ನು ಮುಂದುವರಿಸಿದ್ದು ಅಗತ್ಯ ವಸ್ತುಗಳನ್ನು ಪೂರೈಸಲು ಒಪ್ಪಿಕೊಂಡಿದೆ ಎನ್ನಲಾಗಿದೆ. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಡಿಯಲ್ಲಿ 2024-2025 ರ ಅವಧಿಯಲ್ಲಿ ಸರ್ಕಾರವು ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಅಕ್ಕಿ, ಗೋಧಿ, ಹಿಟ್ಟು, ಸಕ್ಕರೆ, ಧಾನ್ಯ, ನದಿ ಮರಳನ್ನು ಒಳಗೊಂಡಂತೆ ಕೆಲವು ಪ್ರಮಾಣದ ಅಗತ್ಯ ವಸ್ತುಗಳನ್ನು ಮಾಲ್ಡೀವ್ಸ್ಗೆ ರಫ್ತು (Export) ಮಾಡಲು ಒಪ್ಪಿಗೆ ನೀಡಿದೆ ಎಂದು ವರದಿ ತಿಳಿಸಿದೆ. ಈ ವಸ್ತುಗಳ ರಫ್ತು 2024-25 ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಅಥವಾ ಭವಿಷ್ಯದ ಯಾವುದೇ ನಿರ್ಬಂಧ/ನಿಷೇಧದಿಂದ ವಿನಾಯಿತಿ ಪಡೆಯುತ್ತದೆ.
ಇದಕ್ಕಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದೆ ಜೊತೆಗೆ ದೀರ್ಘಕಾಲ ಇಂತಹ ಗೆಳೆತನ ಬಯಸುವುದಾಗಿ ಹೇಳಿದೆ. ಮಾಲ್ಡೀವ್ಸ್ನಿಂದ ಭಾರತ ಸ್ಕ್ರ್ಯಾಪ್ ಲೋಹಗಳು ಆಮದು ಮಾಡುತ್ತದೆ. ಆದರೆ ಮಾಲ್ಡೀವ್ಸ್ಗೆ ಭಾರತ ವಿವಿಧ ಎಂಜಿನಿಯರಿಂಗ್ ಮತ್ತು ಕೈಗಾರಿಕಾ ಉತ್ಪನ್ನಗಳು, ಔಷಧಗಳು, ರಾಡಾರ್ ಉಪಕರಣಗಳು, ಸಿಮೆಂಟ್, ಕೃಷಿ ಉತ್ಪನ್ನಗಳಾದ ಅಕ್ಕಿ, ಸಾಂಬಾರ ಪದಾರ್ಥಗಳು, ಹಣ್ಣುಗಳು, ತರಕಾರಿಗಳು ಮತ್ತು ಕೋಳಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಶುಕ್ರವಾರದ ಪ್ರಕಟಣೆಯ ಪ್ರಕಾರ, ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆಕಾಳುಗಳ ಕೋಟಾದಲ್ಲಿ 5% ರಷ್ಟು ಹೆಚ್ಚಳವಾಗಿದೆ.
ಮಾಲ್ಡೀವ್ಸ್ನಲ್ಲಿರುವ ಭಾರತೀಯ ಸೇನೆಯನ್ನು (Indian Army) ದೇಶವನ್ನು ತೊರೆಯುವಂತೆ ಆದೇಶಿಸಿದ್ದಲ್ಲದೆ, ಅವರು ಚೀನಾದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಲ್ಲದೆ ಹಲವು ಸಂಪ್ರದಾಯಗಳನ್ನು ಮುರಿದು ಚೀನಾದೊಂದಿಗೆ ನಿಕಟವಾಗಿ ವ್ಯವಹರಿಸಲು ಶುರು ಮಾಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಯಿಝೂ ಸರ್ಕಾರದ ಸಚಿವರು ಭಾರತದ ಪಿಎಂ ವಿರುದ್ಧ ಅನುಚಿತ ಹೇಳಿಕೆಗಳನ್ನು ನೀಡಿ ಭಾರತೀಯರ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಇದರಿಂದ ಭಾರತೀಯರು ಮಾಲ್ಡೀವ್ಸ್ಗೆ ಭಹಿಷ್ಕಾರ ಹಾಕಿ ಲಕ್ಷದ್ವೀಪದ ಕಡೆಗೆ ಮುಖ ಮಾಡಿದ್ದ ಘಟನೆಗಳು ನಡೆದಿದ್ದವು.