ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಕನ್ನಡವನ್ನು ಸರಿಯಾಗಿ ಬರೆಯುವವರ ಸಂಖ್ಯೆ ಕಡಿಮೆಯಾಗಿದೆಯೇ ಅನ್ನುವ ಅನುಮಾನ ಮೂಡಿಸುವಂತಿದೆ. ಅಚ್ಚ ಕನ್ನಡದಲ್ಲಿ ತಪ್ಪಿಲ್ಲದೆ ಸರಳ ಸುಂದರವಾಗಿ ಬರೆಯುವವರೇ ವಿರಳ. ಅದರಲ್ಲೂ ನಮ್ಮ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಕೆಲವರ ಕನ್ನಡ ಬರವಣಿಗೆಯನ್ನು ನೋಡಿದರೆ ಹೃದಯಾಘಾತವಾಗುವುದೊಂದೇ ಬಾಕಿ ಇರುತ್ತದೆ.
ಹೌದು, ತುಂಬಾ ಸಲ ನಮ್ಮ ಆಧಾರ್ ಕಾರ್ಡ್ , ವೋಟರ್ ಐಡಿಯಲ್ಲಿ ಕನ್ನಡದ ಕಗ್ಗೊಲೆಯೇ ನಡೆದಿರುತ್ತದೆ. ಕನ್ನಡ..ಕನ್ನಡ ಎಂದು ಬೊಬ್ಬೆ ಹೊಡೆಯುವ ಸರ್ಕಾರ ತನ್ನ ಕೆಲಸಗಳಿಗೆ ಕನ್ನಡ ಸರಿಯಾಗಿ ಬರೆಯುವವರನ್ನು ಏಕೆ ನೇಮಕ ಮಾಡಿಕೊಳ್ಳುವುದಿಲ್ಲ ಅನ್ನುವುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ನಮಗೆಲ್ಲರಿಗೂ ಗೊತ್ತಿದೆ ಮತದಾನಕ್ಕೂ ಮೊದಲು ನಮ್ಮ ಮತದಾನದ ಕೇಂದ್ರ, ಹೆಸರು, ಕ್ರಮ ಸಂಖ್ಯೆಯುಳ್ಳ ಮಾಹಿತಿಯನ್ನು ಚೀಟಿಯೊಂದರಲ್ಲಿ ಸಮಗ್ರವಾಗಿ ನೀಡುತ್ತಾರೆ. ಪ್ರತಿಯೊಬ್ಬರು ಕೂಡ ಈ ಚೀಟಿಯನ್ನು ಮತದಾನಕ್ಕೂ ಮೊದಲು ಪಡೆದುಕೊಂಡಿರುತ್ತಾರೆ. ಹಾಗೆಯೇ ಇಲ್ಲೊಬ್ಬರಿಗೆ ಲೋಕ ಸಭಾ ಚುನಾವಣೆಯ ಮತದಾನದ ಚೀಟಿ ನೀಡಲಾಗಿದೆ. ಅವರಿಗೆ ಅದನ್ನು ನೋಡಿ ದೊಡ್ಡ ಶಾಕ್ ಆಗಿದೆ. ಏಕೆಂದರೆ ಅವರ ಹೆಸರನ್ನು ಅಬ್ದುಲ್ ಖಾದರ್ ಬದಲಿಗೆ ‘ಅಬ್ದುಲ್ ನಾಯಿ’ ಎಂದು ಅಚ್ಚು ಒತ್ತಿ ಅವರಿಗೆ ಕಳುಹಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೆಟ್ಟಣಿಗೆ ಮುಳ್ಳೂರು ಗ್ರಾಮದ ಗೋಳಿತ್ತಡಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರ 210ರಲ್ಲಿ ಮತ ಹಾಕಲು ಹೋಗುವ ಮುನ್ನ ಇಂತಹದ್ದೊಂದು ಕಹಿ ಘಟನೆ ನಡೆದಿದೆ. ಈ ಫೋಟೋ ಇದೀಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.