ನ್ಯೂಸ್ ನಾಟೌಟ್: ಪಶ್ಚಿಮ ಬಂಗಾಳದಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಈ ನಡುವೆ ಲೈವ್ ನಲ್ಲಿ ಸುದ್ದಿ ಓದುತ್ತಿದ್ದ ದೂರದರ್ಶನದ ನಿರೂಪಕಿ ಲೋಪಮುದ್ರ ಸಿನ್ಹಾ ಎಂಬವರು ಮೂರ್ಛೆ ಹೋಗಿರುವ ಘಟನೆ ವರದಿಯಾಗಿದೆ. ಕೋಲ್ಕತ್ತಾ ದೂರದರ್ಶನ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೋಪಮುದ್ರಾ ಸಿನ್ಹಾ, ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ನೀಡಿದ್ದಾರೆ.
ಲೈವ್ನಲ್ಲಿ ಸುದ್ದಿ ವಾಚನ ಮಾಡುವಾಗ ರಕ್ತದೊತ್ತಡದಿಂದ ಕುಸಿದು ಮೂರ್ಛೆ ಹೋದ ಘಟನೆ ಕುರಿತು ಸಿನ್ಹಾ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ನೇರ ಪ್ರಸಾರಕ್ಕೂ ಮುಂಚೆಯೇ ಅಸ್ವಸ್ಥತೆಯ ಅನುಭವವಾಗಿದ್ದರೂ, ಒಂದು ಲೋಟ ನೀರು ಕುಡಿದರೆ ಆರಾಮದಾಯಕವಾಗಬಹುದು ಎಂದು ಭಾವಿಸಿದ್ದ ಅವರು ಸುದ್ದಿ ವಾಚನ ಮುಂದುವರಿಸುವ ಪ್ರಯತ್ನ ಮಾಡಿದ್ದಾರೆ. ಸುದ್ದಿ ವಾಚನವನ್ನು ಮುಂದುವರಿಸಿದ್ದರಿಂದ ಸಿನ್ಹಾರ ಆರೋಗ್ಯ ಸ್ಥಿತಿಯು ಮತ್ತಷ್ಟು ಹದಗೆಟ್ಟಿದ್ದು, ನಿರ್ದಿಷ್ಟವಾಗಿ ಬಿಸಿಗಾಳಿ ಎಂದು ಸುದ್ದಿಯನ್ನು ವಾಚನ ಮಾಡಲು ಪ್ರಾರಂಭಿಸಿದಾಗ ಮೂರ್ಛೆಗೊಳಗಾಗಿದ್ದಾರೆ.
ನೇರ ಪ್ರಸಾರದ ವೇಳೆ ನನ್ನ ಸ್ತಿಮಿತತೆಯನ್ನು ಕಾಪಾಡಿಕೊಳ್ಳಲು ಯತ್ನಿಸಿದರೂ ಕ್ರಮೇಣ ನನ್ನ ದೃಷ್ಟಿ ಮಂಜಾಗುತ್ತಾ ಹೋಯಿತು ಎಂದು ಅವರು ವಿವರಿಸಿದ್ದಾರೆ. “ನನ್ನ ಮಾತುಗಳು ತೊದಲತೊಡಗಿದವು ಹಾಗೂ ಕೊನೆಗೆ ಟೆಲಿಪ್ರಾಂಪ್ಟರ್ ಮಂಜಾಗುತ್ತಾ ಹೋಗುತ್ತಿರುವುದು ನನ್ನ ಕಣ್ಣಿಗೆ ಬಿತ್ತು” ಎಂದು ಅವರು ಬರೆದುಕೊಂಡಿದ್ದಾರೆ. ದಕ್ಷಿಣ ಪಶ್ಚಿ ಮ ಬಂಗಾಳದ ಹಲವಾರು ಪ್ರದೇಶಗಳಲ್ಲಿ ಸದ್ಯ 40 ಡಿಗ್ರಿ ಸೆಲ್ಷಿಯಸ್ ಗಿಂತ ಹೆಚ್ಚು ತಾಪಮಾನವಿದ್ದು, ಈ ಪ್ರಮಾಣವು ಸಾಮಾನ್ಯ ಮಟ್ಟಕ್ಕಿಂತ ಮೂರರಿಂದ ಐದು ಡಿಗ್ರಿ ಸೆಲ್ಷಿಯಸ್ ಹೆಚ್ಚಳಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.