ಸಂದರ್ಶನ: ಹರ್ಷಿತಾ ವಿನಯ್
ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಮಾನಸಿಕ ಕಾಯಿಲೆ ಅನ್ನೋದು ಸಾಮಾನ್ಯವಾಗಿದೆ. ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವು ಕೂಡ ಅಷ್ಟೇ ಮಹತ್ವದ್ದಾಗಿದೆ. ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿದ್ದರೆ ತಕ್ಕಂತೆ ಕೆಲಸ ಮಾಡುತ್ತಿದ್ದರೆ ನಾವು ಸರಿ ಇದ್ದೇವೆ ಎಂದರ್ಥ. ಅದೇ ನಮ್ಮ ಮನಸ್ಸು ನಮ್ಮ ಕೈನಲ್ಲಿ ಇಲ್ಲ ಅದು ನಮ್ಮನ್ನು ಮೀರಿ ಬೆಳೆಯುತ್ತಿದೆ ಎಂದರೆ ಮಾನಸಿಕವಾಗಿ ನಾವು ಸರಿ ಇಲ್ಲವೆಂದು ಅಂದುಕೊಳ್ಳಬಹುದು. ವಿಪರೀತ ಒತ್ತಡ, ಖಿನ್ನತೆ, ಭಯ ನಮ್ಮ ಮಾನಸಿಕ ಆರೋಗ್ಯದ ಹಳಿಯನ್ನು ತಪ್ಪಿಸಬಹುದು. ಇಂದಿನ ದೈನಂದಿನ ಜೀವನದಲ್ಲಿ ಅದೆಷ್ಟೋ ಮಂದಿ ಮಾತ್ರೆಗಳ ಬಲದಿಂದಲೇ ಬದುಕುವಂತಾಗಿದೆ. ಇದಕ್ಕೆಲ್ಲ ಕಾರಣ ಏನು..? ಮಾನಸಿಕ ಆರೋಗ್ಯದ ಗುಣ ಲಕ್ಷಣಗಳೇನು? ಅನ್ನುವುದರ ಬಗ್ಗೆ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋ ವೈದ್ಯೆ ಡಾ| ಪೂನಂ ಅವರು ನ್ಯೂಸ್ ನಾಟೌಟ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ಬಗೆಗಿನ ವರದಿ ಇಲ್ಲಿದೆ ವೀಕ್ಷಿಸಿ.
ಮಾನಸಿಕ ಕಾಯಿಲೆಯ ಮುಖ್ಯ ಗುಣ ಲಕ್ಷಣಗಳೇನು..?
1. ಭಾವನೆಗಳಲ್ಲಿ ಬದಲಾವಣೆ
ನಿಮ್ಮ ಭಾವನೆಗಳಲ್ಲಿ ಏಕಾಏಕಿ ಬದಲಾವಣೆ ಕಾಣ್ತಾ ಇದೆಯಾ? ಅತಿಯಾದ ಸಿಟ್ಟು, ಕೋಪ, ಸಣ್ಣ ವಿಷಯಗಳಿಗೂ ತುಂಬಾ ಬೇಜಾರಾಗುವುದು, ಅತಿಯಾದ ದುಃಖ, ವಿನಾಕಾರಣ ಭಯ, ಭಯದಿಂದ ಮನೆಯಿಂದ ಹೊರ ಹೋಗಲು ಅಂಜಿಕೆ ಹಾಗೂ ಯಾರೊಂದಿಗೂ ಮಾತನಾಡದೆ ಇರುವುದು ಮುಂತಾದ ಭಾವನೆಗಳಲ್ಲಿ ಬದಲಾವಣೆ.
2. ನಿದ್ರೆಯಲ್ಲಿ ವ್ಯತ್ಯಾಸಗಳು
ಮಾನಸಿಕ ಅಸ್ವಸ್ಥತೆಯ ಪ್ರಮುಖ ಲಕ್ಷಣವೆಂದರೆ ಅದುವೇ ಹಸಿವು ಮತ್ತು ನಿದ್ರೆಯಲ್ಲಿನ ಬದಲಾವಣೆ ನಿದ್ರಾಹೀನತೆ ಅಥವಾ ಅತಿಯಾದ ನಿದ್ದೆ, ಆಗಾಗ ಎಚ್ಚರಗೊಳ್ಳುವುದು ಹಾಗೂ ಬೇಗನೆ ಎಚ್ಚರಿಕೆ ಅಂದರೆ ಮಲಗಿದ ಸ್ವಲ್ಪ ಹೊತ್ತಲ್ಲೇ ಎಚ್ಚರಗೊಂಡು ಮತ್ತೆ ನಿದ್ದೆ ಬಾರದೇ ಇರುವುದು ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಬೇಡ.
3. ಹಸಿವೆಯಲ್ಲಿ ವ್ಯತ್ಯಾಸ
ಊಟ ಸೇರುವುದಿಲ್ಲ , ಏನೂ ತಿನ್ನುವುದು ಬೇಡ ಎಂದೆನಿಸುವುದು.
4. ಸುಸ್ತಾಗುವುದು
ತೀವ್ರ ತರದ ಸುಸ್ತು ಉಂಟಾಗುವುದು, ದೇಹದಲ್ಲಿ ಶಕ್ತಿಯೇ ಇಲ್ಲ ಎಂದು ಅನಿಸುವುದು.ಏನಾದ್ರೂ ಸಣ್ಣ ಪುಟ್ಟ ಕೆಲಸ ಮಾಡಿದಾಗ್ಲೂ ಅತಿಯಾದ ಸುಸ್ತಾಗುವುದು ಕೂಡ ಮಾನಸಿಕ ಖಾಯಿಲೆಯ ಒಂದು ಲಕ್ಷಣವಾಗಿದ್ದು ಕಡೆಗಣಿಸಬೇಡಿ.
5. ನಕಾರಾತ್ಮಕ ಆಲೋಚನೆಗಳು
ಮನಸಲ್ಲಿ ನಕಾರಾತ್ಮಕ ಆಲೋಚನೆಗಳು ಬರುವುದು ನನ್ನ ಕೈಯಲ್ಲಿ ಆಗುವುದಿಲ್ಲ ಜೀವನವೇ ಬೇಡ ಸಾಯಬೇಕೆಂದು ಅನಿಸುವುದು ಮಾನಸಿಕ ಸಮಸ್ಯೆಯ ಭಾಗವಾಗಿದೆ.
6. ಅತಿಯಾದ ಶುಚಿತ್ವ ಪದೇ ಪದೇ ತೊಳೆಯುವುದು, ಸ್ನಾನ ಮಾಡುವುದು.
7. ಆತ್ಮಹತ್ಯೆಯ ಪ್ರಯತ್ನಗಳು.
8. ತಲೆನೋವು ಅಥವಾ ಇತರೆ ಶಾರೀರಿಕ ನೋವುಗಳು
9. ಒಬ್ಬರೆ ಇರುವಾಗ ತನ್ನಷ್ಟಕ್ಕೆ ಮಾತನಾಡುವುದು ಮತ್ತು ನಗಾಡುವುದು.
10. ಒಬ್ಬರೇ ಇರುವಾಗ ಯಾರೋ ಮಾತನಾಡಿದ ಹಾಗೆ ಕರೆದ ಹಾಗೆ ಅನಿಸುವುದು.
11. ತಪ್ಪು ಕಲ್ಪನೆಗಳು ಬರುವುದು.
12. ಮಾದಕ ದ್ರವ್ಯದ ವ್ಯಸನಕ್ಕೆ ಮಾರುಹೋಗುವುದು.
ಇದಿಷ್ಟು ಮುಖ್ಯ ಗುಣ ಲಕ್ಷಣಗಳು. ಇಂತಹ ಲಕ್ಷಣಗಳನ್ನು ನೀವು ಎದುರಿಸುತ್ತಿದ್ದರೆ ತಕ್ಷಣ ನಿಮ್ಮ ಹತ್ತಿರದ ಆಸ್ಪತ್ರೆಯನ್ನು ಭೇಟಿಯಾಗಿ. ವೈದ್ಯರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಿರಿ. ಸುಳ್ಯ , ಪುತ್ತೂರು, ಕೊಡಗು ಭಾಗದವರಾಗಿದ್ದರೆ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ – ಸಲಹೆ ಮತ್ತು ಸೂಚನೆಗಳನ್ನು ಪಡೆಯಬಹುದಾಗಿದೆ.