ನ್ಯೂಸ್ ನಾಟೌಟ್: ಕೊರಗಜ್ಜ ಹಾಗೂ ಇತರೆ ದೈವ ದೇವರುಗಳಿಗೆ ನ್ಯಾಯ ಕೊಡಿಸುವುದಾಗಿ ಬಿಜೆಪಿಯವರು ಹೇಳುತ್ತಿದ್ದು ಇದೊಂದು ಬಾಲಿಶ ಹೇಳಿಕೆಯಾಗಿದೆ. ಕೊರಗಜ್ಜನೇ ನಮಗೆಲ್ಲ ನ್ಯಾಯ ಕೊಡಿಸಬೇಕು ಹೊರತು ಕೊರಗಜ್ಜನಿಗೇ ಬಿಜೆಪಿಯವರು ನ್ಯಾಯ ಕೊಡಿಸಲು ಹೊರಟಿರುವುದಕ್ಕೆ ಏನು ಹೇಳಬೇಕು ಅಂತಾನೆ ಗೊತ್ತಾಗುತ್ತಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಕೊಡಿಪ್ಪಾಡಿಯಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಚುನಾವಣೆ ಬಂದಾಗ ಬಿಜೆಪಿಗೆ ಧರ್ಮ ದೇವರು, ದೈವಗಳ ನೆನಪಾಗುತ್ತದೆ. ದೈವ ದೇವರಿಗೆ ನ್ಯಾಯ ಕೊಡಿಸಲು ಬಿಜೆಪಿಯವರಿಗೆ ಸಾಧ್ಯವಿದೆಯೇ..? ರಾಜಕೀಯಕ್ಕಾಗಿ ನಮ್ಮ ದೈವಗಳ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ತಪ್ಪು, ನಕಲಿ ಹಿಂದುತ್ವದ ಮೂಲಕ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ಬಿಜೆಪಿಗೆ ದೈವ ದೇವರೇ ತಕ್ಕ ಬುದ್ಧಿಯನ್ನು ಕರುಣಿಸಲಿ, ನಾವು ಸಂಕಷ್ಟದಲ್ಲಿದ್ದಾಗ ನ್ಯಾಯಕ್ಕಾಗಿ ದೈವ ದೇವರ ಬಳಿ ನ್ಯಾಯಕ್ಕಾಗಿ ಮೊರೆ ಹೋಗುತ್ತೇವೆ.
ಆದರೆ ಬಿಜೆಪಿಯ ಸಿದ್ಧಾಂತ ಬೇರೆಯೇ ಆಗಿದೆ ಎಂದು ಲೇವಡಿ ಮಾಡಿದರು. ಇತ್ತೀಚಿಗೆ ಖಾಸಗಿ ಟೀವಿ ಕಾರ್ಯಕ್ರಮದ ಕಾರ್ಯಕ್ರಮದಲ್ಲಿ ‘ಕೊರಗಜ್ಜನಿಗೆ ನ್ಯಾಯ ಸಿಗಬೇಕಾದರೆ ಮತ್ತು ತುಳುನಾಡಿನ ದೈವ ದೇವರಿಗೆ ನ್ಯಾಯ ಸಿಗಬೇಕಾದರೆ ಬಿಜೆಪಿಗೆ ಮತ ನೀಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಜಾಲತಾಣದಲ್ಲಿ ಜನ ತುಳುನಾಡಿನ ಕಾರ್ಣಿಕದ ದೈವ ಕೊರಗಜ್ಜನ ಹೆಸರು ಯಾಕೆ ತಂದ್ರಿ ಎಂದು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.