ಒಬ್ಬ ಹಾಗೆ ಮಾಡಿದ ಮಾರಾಯ.. ನಾನೂ ಹಾಗೇ ಮಾಡುತ್ತೇನೆಂದು ಕೆಲವರು ಕೆಲಸಕ್ಕೆ ಹೊರಡೋದು ಇದೆ. ಅದನ್ನೇ ಕಾಪಿ ಹೊಡೆಯೋದು ಅನ್ನುತ್ತೇವೆ. ಅದನ್ನೆಲ್ಲ ಬಿಟ್ಟು ನಾವು ಸ್ವಲ್ಪ ಭಿನ್ನವಾಗಿ ಯೋಚಿಸೋಣ.. ಅವ ಹಾಗೆ ಮಾಡಿದ ನಿಜ..ನಾವು ಅದಕ್ಕಿಂತಲೂ ಭಿನ್ನವಾಗಿ ಹೇಗೆ ಕೆಲಸ ಮಾಡೋದು ಅಂತ ಹೊರಡುವ. ಎರಡನೆಯದ್ದು ಪ್ರತಿಭಾವಂತರ ಕೆಲಸ. ಕಾಪಿ ಹೊಡೆಯುವುದು ಸ್ವಂತಿಕೆ ಇಲ್ಲದವರ ಕೆಲಸ. ಹಾಗಾಗಿ ನಾವೆಲ್ಲರು ಭಿನ್ನವಾಗಿ ಕೆಲಸ ಮಾಡುವ ಮೂಲಕ ಕ್ರೀಯಾತ್ಮಕ ಜಗತ್ತನ್ನು ಹುಟ್ಟು ಹಾಕುವ ಅಗತ್ಯವಿದೆ. ಮೊದಲನೆಯದಾಗಿ ನಾವೆಲ್ಲರೂ ಮತ್ತೊಬ್ಬರನ್ನು ಕಾಪಿ ಹೊಡೆಯುವುದನ್ನು ನಿಲ್ಲಿಸಬೇಕು. ಸಾಧ್ಯವಾದರೆ ಅವನಿಗಿಂತ ಭಿನ್ನವಾಗಿ ಕೆಲಸ ಮಾಡಿ ತೋರಿಸ್ತೇನೆ ಅನ್ನುವ ಹಠ ತೋರಿಸಬೇಕು. ಸ್ವಂತಿಕೆ ಇಲ್ಲದೆ ಇನ್ನೊಬ್ಬರನ್ನು ಕಾಪಿ ಹೊಡೆಯುವುದನ್ನು ಜೀವಂತಿಕೆ ಇರುವ ಯಾವ ವ್ಯಕ್ತಿಯೂ ಮಾಡಲಾರ.
ಇತ್ತೀಚಿಗೆ ಒಬ್ಬರು ಹಿರಿಯ ವಯಸ್ಸಿನ ಹಿತೈಷಿ ಸಿಕ್ಕಿದ್ರು.. ಹೀಗೆ ಮಾತನಾಡುತ್ತಾ ಅವರು ಒಂದು ಮಾತು ಹೇಳಿದ್ರು. ‘ನಿಮ್ಮ ನ್ಯೂಸ್ ನಾಟೌಟ್ ತುಂಬಾ ಚೆನ್ನಾಗಿ ಬರ್ತಿದೆ. ಸಣ್ಣ ಸಮಯದಲ್ಲಿ ಇಷ್ಟು ಜನಪ್ರಿಯತೆ ಇದೆ. ಒಳ್ಳೆಯ ಸಾಧನೆಯೇ..ಇನ್ನೊಂದು 10 ವರ್ಷದಲ್ಲಿ ಒಳ್ಳೆ ಟ್ರೆಂಡ್ ಸೆಟ್ ಮಾಡ್ತೀರಿ ಅಂತ. ಹೀಗೆ ಮುಂದುವರಿಯಿರಿ. ಇನ್ನೂ ಒಳ್ಳೆ ಒಳ್ಳೆಯ ಕಾರ್ಯಕ್ರಮ ಮಾಡಿ ಅಂತ ಸಲಹೆ ನೀಡಿದ್ರು. ಹಿರಿಯರ ಮಾತು ಕೇಳಿ ನನಗೆ ಧನ್ಯತಾಭಾವ ಉಕ್ಕಿತು. ‘ಯಜಮಾನ್ರೆ.. ಧನ್ಯವಾದಗಳು ನಿಮ್ಮ ಹೃದಯ ಸ್ಪರ್ಶಿ ಮಾತುಗಳಿಗೆ’ ಎಂದು ನಾನು ಅವರತ್ತ ತಿಳಿ ನಗು ಬೀರಿದೆ. ಈ ಬೆನ್ನಲ್ಲೇ ಮತ್ತೆ ಮಾತು ಶುರು ಮಾಡಿದ ಅವರು, ‘ನಾನು ಮೊನ್ನೆ ಒಂದು ಚಾನೆಲ್ ನಲ್ಲಿ ಕಾರ್ಯಕ್ರಮ ನೋಡಿದೆ. ಅವರು ನಿಮ್ಮದೇ ಕಾರ್ಯಕ್ರಮ ಕಾಪಿ ಹೊಡೆದು ಮಾಡುವ ಪ್ರಯತ್ನ ಮಾಡಿದ್ರು. ಆದ್ರೆ ಅದು ಸಕ್ಸಸ್ ಆಗಲಿಲ್ಲ ನೋಡಿ ಅಂದ್ರು. ಅವರ ಮಾತಿಗೆ ಏನೂ ಉತ್ತರಿಸದೆ ಒಂದು ನಗು ಬೀರಿ ನಿಂತೆ. ಆಗ ನನಗೆ ಒಂದಂತೂ ಪಕ್ಕಾ ಅರ್ಥವಾಯಿತು. ಓದುಗರು ಅಥವಾ ವೀಕ್ಷಕರು ದಡ್ಡರಲ್ಲ. ಪ್ರತಿಯೊಂದು ಮಾಧ್ಯಮವನ್ನು ಕೂಡ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಅನ್ನೋದು. ಅವರು ಹಾಗೆ ಮಾತನಾಡಿದ್ರಲ್ಲಿ ತಪ್ಪಿಲ್ಲ ಬಿಡಿ. ಅವರು ಮಾತನಾಡಿದ್ದನ್ನು ನಾನು ನೂರಕ್ಕೆ ನೂರು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ‘A COMMON MAN IS THE BEST READER’ ಅನ್ನೋದನ್ನ ನಾನು ಗಟ್ಟಿಯಾಗಿ ನಂಬಿದವನು. ಇಂದು ಒಬ್ಬ ಯುಟ್ಯೂಬ್ ಚಾನಲ್ ತೆಗೆದ ಅಂತ ಮತ್ತೊಬ್ಬ, ಅವ ಕಾರ್ಯಕ್ರಮ ಮಾಡಿದ ಅಂತ ಇನ್ನೊಬ್ಬ. ಅದನ್ನೇ ಫಾಲೋ ಮಾಡೋದಾ..? ನಿಮಗೆ ಬೇರೆ ಯಾವ ಕಾರ್ಯಕ್ರಮಗಳು ಸೃಜನಶೀಲತೆಯಿಂದ ಹೊರಗೆ ಬರುವುದಿಲ್ಲವೇ..? ಪತ್ರಿಕೋದ್ಯಮದಲ್ಲಿ ಸೃಜನಶೀಲತೆ ಇಲ್ಲದಿದ್ದರೆ ಬೆಳೆಯೋಕೆ ಸಾಧ್ಯವೇ ಇಲ್ಲ. ನಾವು ಜನರಿಗೆ ಒಂದು ಸಲ ಎರಡು ಸಲ ಸುಳ್ಳು ಹೇಳಿ ನಂಬಿಸಬಹುದು. ಆದರೆ ಹೇಳಿದ ಸುಳ್ಳನ್ನೇ ಎಷ್ಟು ದಿನ ಅಂತ ಹೇಳೋಕೆ ಆಗುತ್ತೆ. ಒಂದು ದಿನ ಜನರ ಎದುರೇ ಅಸಲಿ ಮುಖ ಹೊರಕ್ಕೆ ಬಂದೇ ಬರುತ್ತದೆ.
ಈಗೀಗ ನೀವು ನೋಡಿ, ಜನ ಮಾಧ್ಯಮದ ಮೇಲೆ ನಂಬಿಕೆ ಕಳೆದುಕೊಂಡು ಬಿಟ್ಟಿದ್ದಾರೆ. ಅದಕ್ಕೆ ಕಾರಣ ಈ ಜಾಹೀರಾತು. ಮಾಧ್ಯಮದವರಿಗೆ ಮರ್ಯಾದಿ ಕೊಡುವ ಕಾಲ ಇತ್ತು. ಆದರೆ ಈಗೀಗ ಈ ಜಾಹೀರಾತಿನ ಹೆಸರಲ್ಲಿ ಮರ್ಯಾದಿ ಬೀದಿಗೆ ಬಂದು ನಿಂತಿದೆ. ಪ್ರತಿಯೊಬ್ಬರು ಕೂಡ ಜಾಹೀರಾತು ಕೊಡಿ ಎಂದು ದುಂಬಾಲು ಬೀಳುವುದೇ ಆಗಿದೆ. ಯಾರಿಗೆ ಕೊಡಬೇಕು ಎಂದು ತಿಳಿಯದೆ ಅವ ಗಂಟು ಮುಖ ಹಾಕಿಕೊಂಡು ಬಂದವರನ್ನು ಕಳ್ಳರಂತೆ ನೋಡುವುದು. ಇದೆಲ್ಲ ಇಂದು ಮಾಮೂಲಿಯಾಗಿದೆ. ಇದನ್ನೆಲ್ಲ ಹಾಳು ಮಾಡಿರುವುದು ನಮ್ಮೆದುರಿನ ನಕಲಿ ಚಂದಾದಾರರಲ್ಲದೆ ಮತ್ಯಾರೂ ಅಲ್ಲ. ಜಾಹೀರಾತು ಕೇಳುವುದಕ್ಕಿಂತ ಹೆಚ್ಚಾಗಿ ಭಿಕ್ಷೆ ಬೇಡುವ ಸಂಸ್ಕೃತಿ ಇಂದು ಬೆಳೆದು ನಿಂತಿದೆ. ಈ ಮಾಧ್ಯಮದವರು ಬರುವುದೇ ಚಂದಾ ಎತ್ತುವುದಕ್ಕೆ ಅನ್ನುವ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣಗೊಂಡಿದೆ. ಹೀಗೇ ಹೋದ್ರೆ ಒಂದು ದಿನ ಪತ್ರಿಕೋದ್ಯಮದಲ್ಲಿ ಉಳಿಯುವುದಕ್ಕೆ ಏನೂ ಇರುವುದಿಲ್ಲ.