ನ್ಯೂಸ್ ನಾಟೌಟ್: ವೀಲ್ಹಿಂಗ್ ಮಾಡಲು ಹೋಗಿ ಜಲಮಂಡಳಿ (BWSSB) ತೋಡಿದ ಗುಂಡಿಗೆ ಬಿದ್ದು ಓರ್ವ ಯುವಕ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಕೆಂಗೇರಿ ಬಳಿಯ ಕೊಮ್ಮಘಟ್ಟ ಸರ್ಕಲ್ನಲ್ಲಿ ನಡೆದಿದೆ.
ಘಟನೆಯಲ್ಲಿ ಸದ್ದಾಂ ಪಾಷಾ(20) ಸಾವನ್ನಪ್ಪಿದ್ದರೆ, ಉಮ್ರಾನ್ ಪಾಷಾ ಮತ್ತು ಮುಬಾರಕ್ ಪಾಷಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೆಜೆ ನಗರ ಮೂಲದ ಇವರು ಒಂದೇ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಜಲ ಮಂಡಳಿಯವರು ಪೈಪ್ ಹಾಕಲು ಹಳ್ಳ ತೆಗೆದು ಬ್ಯಾರಿಕೇಡ್ ಹಾಕಿದ್ದರು. ಕೊಮ್ಮಘಟ್ಟ ಸರ್ಕಲ್ ಬಳಿ ಬರುವಾಗ ಬ್ಯಾರಿಕೇಡ್ ನಡುವಿನ ಸಣ್ಣ ಜಾಗದಲ್ಲಿ ವೇಗವಾಗಿ ದ್ವಿಚಕ್ರ ಚಲಾಯಿಸಿದ ಪರಿಣಾಮ ಘಟನೆ ಸಂಭವಿಸಿದೆ. ಸವಾರ ಸದ್ದಾಂ ಪಾಷಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.
ಕೂಡಲೇ ನೆರವಿಗೆ ದಾಖಲಿಸಿದ ಸ್ಥಳೀಯರು ಗಾಯಾಳುಗಳನ್ನು ಗುಂಡಿಯಿಂದ ಮೆಲಕ್ಕೆ ಎತ್ತಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಭಾನುವಾರ(ಎ.14) ರಾತ್ರಿ 8:45ರ ಈ ಘಟನೆ ನಡೆದಿದ್ದು, ವೀಲ್ಹಿಂಗ್ ಮಾಡುವಾಗ ಹೆಡ್ ಲೈಟ್ ಮೇಲೆ ಹೋಗಿದೆ, ಗುಂಡಿ ಕಾಣದೆ ವೇಗವಾಗಿ ಬಂದು ಬ್ಯಾರಿಕೇಡ್ ಗೆ ಗುದ್ದಿ ಬಿದ್ದಿದ್ದಾರೆ ಎನ್ನಲಾಗಿದೆ.