ಕಾಡಾನೆ ಹಿಂಡಿನಿಂದ ಬೇರ್ಪಟ್ಟ ಎರಡು ಕಾಡಾನೆಗಳ ನಡುವೆ ಸೋಮವಾರ(ಎ.೧೪) ಅರ್ಧ ಗಂಟೆಗೂ ಹೆಚ್ಚು ಸಮಯ ಕಾದಾಟ ನಡೆಯಿತು. ಹಾಸನ ತಾಲೂಕಿನ ಅರೇಹಳ್ಳಿ ಹೋಬಳಿಯ ಹುಲ್ಲೇಮಕ್ಕಿ ಗ್ರಾಮದಲ್ಲಿ ಘಟನೆ ನಡೆದಿದೆ.
ಹುಲ್ಲೇಮಕ್ಕಿ ಗ್ರಾಮದ ಯೂನಸ್ ಎಂಬವರ ಮನೆಯ ಮುಂಭಾಗದ ಗೇಟಿನ ಸಮೀಪವೇ ಕರಡಿ ಹಾಗೂ ಕ್ಯಾಪ್ಟನ್ ಎಂಬ ಹೆಸರಿನ ಕಾಡಾನೆಗಳು ಕಾದಾಡಿದವು. ಜನರ ಕೂಗಾಟ ಕಿರುಚಾಟ, ಪಟಾಕಿ ಶಬ್ದಕ್ಕೂ ಹೆದರಲಿಲ್ಲ. ನಂತರ ಕಾಡಿಗೆ ಮರಳಿದವು.
ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ, ಇಟಿಎಫ್ ಮತ್ತು ಆರ್ಆರ್ಟಿ ಸಿಬ್ಬಂದಿ, ಆನೆಗಳು ಸಾಗಿದ ಬಗ್ಗೆ ಮಾಹಿತಿ ಪಡೆದರು. ಆನೆಗಳ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದು, ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.