ನ್ಯೂಸ್ ನಾಟೌಟ್: ಪ್ರಾಚೀನ ಜೈನ ವಿಗ್ರಹಗಳ ಹರಾಜಿಗೆ ಜೈನ ಸಮುದಾಯದಿಂದ ರಾಷ್ಟ್ರವ್ಯಾಪಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಹರಾಜು ಪ್ರಕ್ರಿಯೆಯಿಂದ ಮುಂಬೈ ಹರಾಜುದಾರ ಫಾರುಕ್ ಟೊಡ್ಡಿವಾಲಾ ಹಿಂದೆ ಸರಿದಿದ್ದಾರೆ. ಎಚ್ಚೆತ್ತ ಜೈನ ಸಮುದಾಯ ತಮ್ಮ ಪೂಜ್ಯ ತೀರ್ಥಂಕರರ ವಿಗ್ರಹಗಳನ್ನು ಹರಾಜು ಹಾಕದೇ ಅದನ್ನು ದೇವಾಲಯಗಳಲ್ಲಿ ಪೂಜೆಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಹರಾಜುದಾರ ಫಾರುಕ್ ಟೊಡ್ಡಿವಾಲಾ ಅವರು, ಈ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದಾರೆ. ದೆಹಲಿ ಮೂಲದ ವಿಶ್ವ ಜೈನ್ ಸಂಘಟನೆಯು ಹರಾಜುದಾರ ಟೊಡ್ಡಿವಾಲಾ ವಿರುದ್ಧ ಸೈಬರ್ ಕ್ರೈಮ್ನಲ್ಲಿ ದೂರು ದಾಖಲಿಸಿದೆ. ಟೊಡ್ಡಿವಾಲಾ ಅವರು ಏಪ್ರಿಲ್ 16 ರಂದು ದಿ ತಾಜ್, ಕೊಲಾಬಾದಲ್ಲಿ ಹರಾಜಾಗಲಿರುವ ವಸ್ತುಗಳ ಬಗ್ಗೆ 180 ಲೇಖನಗಳ ಕ್ಯಾಟಲಾಗ್ನ್ನು ಹಂಚಿಕೊಂಡಿದ್ದರು. ಇದಾದ ನಂತರ ವಿಶ್ವ ಜೈನ್ ಸಂಘಟನೆ ಪ್ರಕರಣ ದಾಖಲಿಸಿದೆ. ಈ ಕ್ಯಾಟಲಾಗ್ನಲ್ಲಿ 17 ಪುರಾತನ ದೇವಾಲಯಗಳು, ಮರಳು ಗಲ್ಲುಗಳು ಮತ್ತು ಜೈನ ತೀರ್ಥಂಕರರ ಬಲಿಪೀಠಗಳು ಮತ್ತು ಯಕ್ಷಿಣಿಗಳು ಸೇರಿವೆ. ಅವುಗಳಲ್ಲಿ ಕೆಲವು ಒಂಬತ್ತನೇ ಶತಮಾನಕ್ಕಿಂತಲೂ ಹಿಂದಿನದ್ದಾಗಿವೆ. ಜೈನ ವಿಗ್ರಹಗಳ ಹರಾಜು ಪ್ರಕ್ರಿಯೆಗೆ ಜೈನರಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಏಪ್ರಿಲ್ 3 ರಂದು ಕಲಬಾದೇವಿಯ ಗುಳಲವಾಡಿ ಜೈನ ದಿಗಂಬರ ಮಂದಿರದಲ್ಲಿ ಜೈನ ಸಮುದಾಯದವರು ಹಾಗೂ ಹರಾಜುದಾರರ ನಡುವೆ ಸಭೆ ಆಯೋಜಿಸಲಾಗಿತ್ತು.
ಟೊಡ್ಡಿವಾಲಾ ಅವರ ಇಬ್ಬರು ಪುತ್ರರು ಜೈನ ಸನ್ಯಾಸಿ ಆಚಾರ್ಯ ಪುಷ್ಪದಂತ್ ಸಾಗರ್ಜಿ ಅವರನ್ನು ದೇವಸ್ಥಾನದಲ್ಲಿ ಭೇಟಿಯಾಗಿ, ಜೈನ ವಿಗ್ರಹಗಳನ್ನು ಹರಾಜು ಮಾಡದೇ ಇರಲು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. ಸಭೆಯಲ್ಲಿ ಉಪಸ್ಥಿತರಿದ್ದ ದಿಗಂಬರ ಜೈನ ಜಾಗತಿಕ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಜಮನಾಲಾಲ್ ಹಪಾವತ್ ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿ, ನಮ್ಮ ದೇವರ ವಿಗ್ರಹಗಳನ್ನು ಯಾರಾದರೂ ಹರಾಜು ಹಾಕಿದರೆ ನಾವು ಮೂಕ ಪ್ರೇಕ್ಷಕರಾಗಲು ಸಾಧ್ಯವಿಲ್ಲ. ಅವು ನಮ್ಮ ನಂಬಿಕೆಯ ಪ್ರತೀಕ. ಇಡೀ ಸಮುದಾಯದಲ್ಲಿ ಇದಕ್ಕೆ ವಿರೋಧವಿದೆ ಹೀಗಾಗಿ, ನಾವು ಹರಾಜುದಾರರನ್ನು ಭೇಟಿ ಮಾಡಿ ಉದ್ದೇಶಿತ ಹರಾಜಿನ ಬಗ್ಗೆ ಸಮುದಾಯದ ಭಾವನೆಗಳನ್ನು ತಿಳಿಸಿದ್ದೇವೆ. ಅವರು ನಮ್ಮ ಆಚಾರ್ಯರನ್ನು ಭೇಟಿಯಾಗಿ ಹರಾಜನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ವಿಗ್ರಹಗಳ ಭವಿಷ್ಯದ ಯೋಜನೆಗಳನ್ನು ಚರ್ಚಿಸಲು ಅವರು ಮತ್ತೊಮ್ಮೆ ನಮ್ಮನ್ನು ಭೇಟಿ ಮಾಡುತ್ತಾರೆ ಎಂದು ಹೇಳಿದರು.