ನ್ಯೂಸ್ ನಾಟೌಟ್: ಇಸ್ರೇಲ್ (Israel) ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಅಮೆರಿಕದ ಪ್ರತಿಷ್ಠಿತ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳನ್ನು ಕ್ಯಾಂಪಸ್ ನಲ್ಲಿ ಬಂಧಿಸಲಾಗಿದೆ. ಗುರುವಾರ(ಎ.25) ಮುಂಜಾನೆ ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಶಿಬಿರಕ್ಕಾಗಿ ಪ್ರತಿಭಟನಾಕಾರರು ಟೆಂಟ್ಗಳನ್ನು ಸ್ಥಾಪಿಸಿದ್ದರು.
ನಂತರ ತಮಿಳುನಾಡು ಮೂಲದ ಅಚಿಂತ್ಯ ಶಿವಲಿಂಗನ್ ಮತ್ತು ಹಸನ್ ಸೈಯದ್ ನನ್ನು ಬಂಧಿಸಲಾಗಿದೆ. ಇಬ್ಬರು ಪದವೀಧರ ವಿದ್ಯಾರ್ಥಿಗಳನ್ನು ಅತಿಕ್ರಮ ಪ್ರವೇಶ ಆರೋಪದಲ್ಲಿ ಬಂಧಿಸಲಾಗಿದೆ. ಈ ಬೆಳವಣಿಗೆಯಾದ ತಕ್ಷಣ ವಿವಿ ಕ್ಯಾಂಪಸ್ನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಕ್ಯಾಂಪಸ್ನಲ್ಲಿ ಟೆಂಟ್ಗಳನ್ನು ಹಾಕುವುದು ವಿವಿ ನೀತಿ ಉಲ್ಲಂಘನೆ ಎಂದು ಹೇಳಲಾಗಿದೆ. ಶಿವಲಿಂಗಂ ಪ್ರಿನ್ಸ್ಟನ್ನಲ್ಲಿ ಸಾರ್ವಜನಿಕ ವ್ಯವಹಾರಗಳ ವಿಷಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾರೆ. ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಗಾಜಾದಲ್ಲಿ ಅಪಾರ ಸಾವು-ನೋವುಗಳಾಗಿವೆ ಎಂದು ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಾವಿರಾರು ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್ಗಳಲ್ಲಿ ದಾಂಧಲೆ ಸೃಷ್ಟಿಸಿ, ಪ್ಯಾಲೆಸ್ಟೈನ್ ಪರ ಪ್ರತಿಭಟನೆಗಳನ್ನು ನಡೆಸುತ್ತಿರುವುದು ಯುಎಸ್ ಉನ್ನತ ವಿಶ್ವವಿದ್ಯಾಲಯಗಳನ್ನು ಬೆಚ್ಚಿಬೀಳಿಸಿದೆ.