ನ್ಯೂಸ್ ನಾಟೌಟ್ : ಇರಾನ್ ಜಪ್ತಿ ಮಾಡಿರುವ ಇಸ್ರೇಲ್ಗೆ ಸಂಬಂಧಿಸಿದ ಸರಕು ಸಾಗಣೆ ಹಡಗಿನಲ್ಲಿರುವ 17 ಮಂದಿ ಭಾರತೀಯ ಸಿಬ್ಬಂದಿಯನ್ನು ಭೇಟಿ ಮಾಡಲು ಭಾರತ ಸರ್ಕಾರದ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು ಎಂದು ಇರಾನ್ ಸೋಮವಾರ(ಎ.15) ತಿಳಿಸಿದೆ.
ಇರಾನ್ ವಿದೇಶಾಂಗ ಸಚಿವ ಅಮೀರ್ ಅಬ್ದೊಲ್ಲಾಹಿಯಾನ್ ಅವರಿಗೆ ಕರೆ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಸಿಬ್ಬಂದಿ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ವಿಚಾರದಲ್ಲಿ ನೆರವು ನೀಡುವಂತೆ ಜೈಶಂಕರ್ ಮನವಿ ಮಾಡಿದ್ದರು ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.
“ನಾವು ಜಪ್ತಿ ಮಾಡಿದ ಹಡಗಿನ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಹಡಗಿನಲ್ಲಿರುವ ಸಿಬ್ಬಂದಿಯನ್ನು ಭೇಟಿ ಮಾಡಲು ಭಾರತ ಸರ್ಕಾರದ ಪ್ರತಿನಿಧಿಗಳಿಗೆ ಶೀಘ್ರವೇ ಸಾಧ್ಯವಾಗಲಿದೆ ಎಂದು ಅಬ್ದೊಲ್ಲಾಹಿಯಾನ್ ಅವರು ಈ ಸಂಬಂಧ ತಿಳಿಸಿದ್ದಾರೆ” ಎಂದು ಮಾಹಿತಿ ನೀಡಿದೆ. ಇಸ್ರೇಲ್ಗೆ ಸೇರಿದ ಸರಕು ಸಾಗಣೆ ಹಡಗನ್ನು ಇರಾನ್ ಪಡೆಗಳು ಶನಿವಾರ ವಶಪಡಿಸಿಕೊಂಡಿದ್ದವು. ಹಡಗಿನಲ್ಲಿರುವ ಸಿಬ್ಬಂದಿಯನ್ನು ಬಿಡುಗಡೆ ಮಾಡಿಸುವ ಸಂಬಂಧ ಭಾರತವು ತಕ್ಷಣವೇ ಇರಾನ್ ಅನ್ನು ಸಂಪರ್ಕಿಸಿತ್ತು. ಇಸ್ರೇಲ್ ಹಾಗೂ ಇರಾನ್ ನಡುವಿನ ಉದ್ವಿಗ್ನ ಸ್ಥಿತಿ ಇನ್ನಷ್ಟು ತೀವ್ರವಾಗುತ್ತಿರುವ ನಡುವೆ ಪರಿಸ್ಥಿತಿ ಕೈ ಮೀರುವುದನ್ನು ತಡೆಯುವಂತೆ ಎಸ್ ಜೈಶಂಕರ್ ಕರೆ ನೀಡಿದ್ದಾರೆ.