ನ್ಯೂಸ್ ನಾಟೌಟ್: ಇಸ್ರೇಲ್ನತ್ತ ನುಗ್ಗಿ ಬರುತ್ತಿದ್ದ ಇರಾನ್ನ ಹಲವು ಡ್ರೋನ್ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸುತ್ತಿರುವ ಇರಾನ್ ನಡೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಖಂಡಿಸಿದ್ದಾರೆ. ಮಿತ್ರ ರಾಷ್ಟ್ರ ಇಸ್ರೇಲ್ ಪರ ನಿಲ್ಲುವುದಾಗಿ ಹೇಳಿದ್ದ ಬೈಡನ್ ಇಸ್ರೇಲ್ಗೆ ಸೇನಾ ನೆರವನ್ನು ಒದಗಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ಸ್ಥಿತಿಯ ಕುರಿತು ಮಾತನಾಡಿದ ಇಬ್ಬರು ಅಧಿಕಾರಿಗಳು, ಕೆಲವು ಕ್ಷಿಪಣಿಗಳನ್ನು ಅಮೆರಿಕ ನೌಕಾಪಡೆ ಹೊಡೆದುರುಳಿಸಿದೆ ಎನ್ನಲಾಗಿದೆ. ಸಿರಿಯಾದ ಡಮಾಸ್ಕಸ್ನಲ್ಲಿ ಇರಾನ್ ಕಚೇರಿಯ ಮೇಲಿನ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಇದು ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಹೇಳಿದೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಸಚಿವಾಲಯ, ‘ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡುತ್ತಿದೆ. ಇದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಉದ್ವಿಗ್ನತೆ ತಗ್ಗಿಸುವ ಮೂಲಕ ಶಾಂತಿ ಮರಳಲು ಪ್ರಯತ್ನಿಸಬೇಕಿದೆ. ಹಿಂಸೆಯಿಂದ ಹಿಂದೆ ಸರಿದು ರಾಜತಾಂತ್ರಿಕ ಹಾದಿಗೆ ಮರಳಬೇಕು ಎಂದು ಭಾರತ ಕರೆ ನೀಡುತ್ತದೆ’ ಎಂದು ಹೇಳಿದೆ. ‘ಈ ಪ್ರದೇಶದಲ್ಲಿನ ಭಾರತದ ರಾಯಭಾರ ಕಚೇರಿಗಳು ಭಾರತೀಯ ಪ್ರಜೆಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ’ ಎಂದು ಅದು ತಿಳಿಸಿದೆ.