ನ್ಯೂಸ್ ನಾಟೌಟ್: ಚುನಾವಣೆಗೆ ಸ್ಪರ್ಧಿಸಲು ಹಾಲಿ ಬಿಜೆಪಿ ಸಂಸದ ರಾಮ್ ಶಂಕರ್ ಕಥೇರಿಯಾ ತಮ್ಮ ನಾಮಪತ್ರ ಸಲ್ಲಿಸಿದ ನಾಲ್ಕು ದಿನಗಳಲ್ಲಿ ಅವರ ಪತ್ನಿ ಮೃದುಲಾ ಕಥೇರಿಯಾ ಅದೇ ಕ್ಷೇತ್ರದಲ್ಲಿ ಬುಧವಾರ(ಎ.23) ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಘಟನೆ ಉತ್ತರ ಪ್ರದೇಶದ ಇಟಾವ ಲೋಕಭಾ ಕ್ಷೇತ್ರದಲ್ಲಿ ನಡೆದಿದೆ.
ತಾವು ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಪತ್ನಿ ಮೃದುಲಾ ಹೇಳಿದ್ದು, “ನಾಮಪತ್ರಗಳನ್ನು ವಾಪಸ್ ಪಡೆಯಲು ಸಲ್ಲಿಸಲಾಗುತ್ತಿಲ್ಲ. ನಾನು ಚುನಾವಣೆ ಸ್ಪರ್ಧಿಸುತ್ತೇನೆ, ಇದು ನನ್ನ ಜನ್ಮಸಿದ್ಧ ಹಕ್ಕು,” ಎಂದು ಆಕೆ ಹೇಳಿದ್ದಾರೆ. ಈ ಕ್ಷೇತ್ರದಲ್ಲಿ ಮೇ 13ರಂದು ಚುನಾವಣೆ ನಡೆಯಲಿದ್ದು ಎಪ್ರಿಲ್ 29 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ತಮ್ಮ ಪತ್ನಿಯ ನಾಮಪತ್ರದ ಬಗ್ಗೆ ಪ್ರತಿಕ್ರಿಯಿಸಿದ ರಾಮ್ ಶಂಕರ್, “ಆಕೆ ಪ್ರತಿ ಬಾರಿ ನಾಮಪತ್ರ ಸಲ್ಲಿಸಿ ನಂತರ ವಾಪಸ್ ಪಡೆಯುತ್ತಾರೆ. ಚುನಾವಣೆ ಸ್ಪರ್ಧಿಸುವ ನಿರ್ಧಾರ ಆಕೆಯದ್ದಾಗಿದೆ,” ಎಂದಿದ್ದಾರೆ.
ಹಿರಿಯ ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿ, “ಮುನ್ನೆಚ್ಚರಿಕಾ ಕ್ರಮವಾಗಿ ಆಕೆಯ ನಾಮಪತ್ರ ಸಲ್ಲಿಸಲಾಗಿದೆ. ರಾಮ್ ಶಂಕರ್ ನಾಮಪತ್ರದಲ್ಲಿ ಏನಾದರೂ ಸಮಸ್ಯೆಯಿದ್ದರೆ ಆಕೆ ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧಿಸಬಹುದು,” ಎಂದು ಹೇಳಿದ್ದಾರೆ ಎನ್ನಲಾಗಿದೆ.