ನ್ಯೂಸ್ ನಾಟೌಟ್: ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಮತ್ತಷ್ಟು ರಂಗೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಉತ್ತರ ಪ್ರದೇಶದ ವಾರಾಣಸಿ(Varanasi) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದೇ ಕ್ಷೇತ್ರದಿಂದ ತೃತೀಯ ಲಿಂಗಿ ಹಿಮಾಂಗಿ ಸಖಿ ಚುನಾವಣಾ ಕಣಕ್ಕಿಳಿಸಲಾಗಿದೆ ಎಂದು ವರದಿ ತಿಳಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಹಿಮಾಂಗಿ ಸಖಿಗೆ ಚುನಾವಣಾ ಟಿಕೆಟ್ ನೀಡಿದೆ.
5 ಭಾಷೆಗಳಲ್ಲಿ ಭಗವತ್ ಕಥಾವನ್ನು ಹೇಳುವ ಹಿಮಾಂಗಿ ಏಪ್ರಿಲ್ 10 ರೊಳಗೆ ವಾರಾಣಸಿಗೆ ಬರಲಿದ್ದಾರೆ. ಅವರೇ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಲಿದ್ದು, ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಿಷಿ ಕುಮಾರ್ ತ್ರಿವೇದಿ ನಿನ್ನೆ ಉತ್ತರ ಪ್ರದೇಶದ 20 ಲೋಕಸಭಾ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಇವುಗಳಲ್ಲಿ ಅತ್ಯಂತ ವಿಶೇಷವಾದದ್ದು ಮಹಾಮಂಡಲೇಶ್ವರ ಹಿಮಾಂಗಿ ಎನ್ನಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾದ ನಂತರ ತೃತೀಯ ಲಿಂಗಿಗಳಿಗೆ ಅವರ ಹಕ್ಕು ಮತ್ತು ಗೌರವವನ್ನು ಒದಗಿಸುವ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಹಿಮಾಂಗಿ ಸಖಿ.
ಪ್ರಧಾನಿ ಮೋದಿಯವರ ಬೇಟಿ ಬಚಾವೋ-ಬೇಟಿ ಪಢಾವೋ ಘೋಷಣೆ ಚೆನ್ನಾಗಿದೆ, ಆದರೆ ಅವರು ಕಿನ್ನರ್ ಬಚಾವೋ-ಕಿನ್ನರ್ ಪಢಾವೋ ಬಗ್ಗೆ ಎಂದಿಗೂ ಮಾತನಾಡಲಿಲ್ಲ, ನಾನು ಅದರ ಮೇಲೆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ತೃತೀಯಲಿಂಗಿಗಳಿಗೂ ಉದ್ಯೋಗ, ಲೋಕಸಭೆ, ವಿಧಾನಸಭೆ, ಶಾಲಾ-ಕಾಲೇಜುಗಳಲ್ಲಿ ಮೀಸಲಾತಿ ಸಿಗಬೇಕು. ಅವರ ಪ್ರತಿನಿಧಿಯೂ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಬೇಕು, ಅವರ ಹಿತಾಸಕ್ತಿಯಲ್ಲಿ ಕೆಲಸ ಮಾಡಬಹುದು. ಯಾರನ್ನೂ ಅಥವಾ ಪ್ರಧಾನಿಯನ್ನು ಸೋಲಿಸುವುದು ಉದ್ದೇಶವಲ್ಲ, ಆದರೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಜನರ ವಿಶ್ವಾಸ ಗಳಿಸುವುದು ಮುಖ್ಯ ಎಂದಿದ್ದಾರೆ.