ನ್ಯೂಸ್ ನಾಟೌಟ್: ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಂಗಳವಾರ(ಎ.೩೦) ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ನನ್ನ ಮತ್ತು ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರೆ ನಾನು ಸುಮ್ಮನಿರುವುದಿಲ್ಲ. ಎಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರು ಆರೋಪಕ್ಕೆ ಸಂಬಂಧಿಸಿದಂತೆ SIT ತನಿಖೆ ನಡೆಯುತ್ತಿದೆ. ತನಿಖೆ ನಡೆದು ಸತ್ಯ ಹೊರಬರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅಂತಾನೇ ನಾನು ಹೇಳಿದ್ದೇನೆ. ಸುಖಾಸುಮ್ಮನೆ ಈ ಪ್ರಕರಣದಲ್ಲಿ ನನ್ನ ಮತ್ತು ಎಚ್.ಡಿ.ದೇವೇಗೌಡರ ಹೆಸರು ತರುವುದು ಸರಿಯಲ್ಲ’ವೆಂದು ಕಿಡಿಕಾರಿದ್ದಾರೆ. ಚುನಾವಣೆ ಸಮಯದಲ್ಲಿ ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದ ಎಚ್ಡಿಕೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಗುಡುಗಿದರು. ಸಿದ್ದರಾಮಯ್ಯನವೇ ನಿಮ್ಮ ಮನೆಯಲ್ಲಿ ನಡೆದಿರುವ ದುರ್ಘಟನೆಯನ್ನು ಮರೆಯಬೇಡಿ.
ರಾಕೇಶ್ ಸಿದ್ದರಾಮಯ್ಯ ಸಾವನ್ನಪ್ಪಿದಾಗ ಪ್ರಧಾನಿ ಮೋದಿ ಮತ್ತು ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದನ್ನು ಮರೆಯಬೇಡಿ. ಸುಖಾಸುಖಮ್ಮನೆ ಈ ಪ್ರಕರಣದಲ್ಲಿ ಪ್ರಧಾನಿ ಮೋದಿಯವರ ಹೆಸರು ತಳಕು ಹಾಕುವುದು ಸರಿಯಲ್ಲ. ನಾನು ಸಹ ನಿಮ್ಮ ಮನೆಯಲ್ಲಿ ನಡೆದ ವಿಚಾರವನ್ನು ಹೊರತರುತ್ತೇನೆ. ನಿಮ್ಮ ಪುತ್ರ ರಾಕೇಶ್ ಸಿದ್ದರಾಮಯ್ಯರ ಸಾವಿನ ರಹಸ್ಯವನ್ನೂ ಬಯಲಿಗೆ ತರುತ್ತೇನೆ ಅಂತಾ ಪರೋಕ್ಷವಾಗಿ ಆರೋಪಿಸಿದ್ದಾರೆ. ಸಿದ್ದರಾಮಯ್ಯರ ಕುಟುಂಬದಲ್ಲಿ ನಡೆದಿದ್ದ ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ಮರೆತಿದ್ದೀರಿ. ಎಲ್ಲಾ ದಾಖಲೆಗಳನ್ನೂ ನಾವು ಹೊರಗಡೆ ತರುತ್ತೇವೆ. ನಿಮ್ಮ ಕುಟುಂಬದಲ್ಲಿ ಏನೇನಾಯಿತು ಎಲ್ಲವೂ ಹೊರಗೆ ಬರಲಿದೆ. ಈ ಸಂದರ್ಭದಲ್ಲಿ ನಾನು ಅದನ್ನು ಬಳಸಿಕೊಳ್ಳುವುದಿಲ್ಲ. ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಬೇಕಿರುವುದು ನಮ್ಮ ಮನೆಯ ಮುಂದೆ ಅಲ್ಲ, ಡಿ.ಕೆ.ಶಿವಕುಮಾರ್ ಮನೆ ಮುಂದೆ. ನಮ್ಮ ಮನೆ ಮುಂದೆ ಪ್ರತಿಭಟನೆ ಮಾಡಲು ಬಂದರೆ ನಾನು ಸುಮ್ಮನೆ ಇರಲ್ಲ ಎಂದಿದ್ದಾರೆ.