ನ್ಯೂಸ್ ನಾಟೌಟ್: ಸರಕು ಸಾಗಣೆ ರೈಲಿನ ಚಕ್ರಗಳ ನಡುವಿನ ಜಾಗದಲ್ಲಿ ಅಡಗಿ ಕುಳಿತು ಸುಮಾರು 100 ಕಿಲೋ ಮೀಟರ್ ಪ್ರಯಾಣಿಸಿದ್ದ ಅಸಹಾಯಕ ಬಾಲಕನನ್ನು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ರಕ್ಷಿಸಿರುವ ಘಟನೆ ಉತ್ತರಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಮಾರು 100 ಕಿಲೋ ಮೀಟರ್ ದೂರ ಪ್ರಯಾಣಿಸಿದ್ದ ಬಾಲಕನನ್ನು ಕೊನೆಗೂ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಅಧಿಕಾರಿ ರಕ್ಷಿಸಿದ್ದಾರೆ. ಆದರೆ ಸುಡು ಬಿಸಿಲಿನ ಶಾಖದ ನಡುವೆ ರೈಲಿನ ವ್ಹೀಲ್ ಸೆಟ್ ನಡುವೆ ಬಾಲಕ ಕುಳಿತುಕೊಂಡು ಪ್ರಯಾಣಿಸಿರುವುದು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಬಾಲಕನನ್ನು ಆರ್ ಪಿಎಫ್ ಕಾನ್ಸ್ ಟೇಬಲ್ ಹೊರ ಕರೆತರುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇಡೀ ದೇಹವೆಲ್ಲಾ ಕಪ್ಪು ಮಸಿಯಿಂದ ತುಂಬಿ ಹೋಗಿದ್ದ ಬಾಲಕನನ್ನು ರಕ್ಷಿಸಿದ ಕಾನ್ಸ್ ಟೇಬಲ್ ಕರ್ತವ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.