ನ್ಯೂಸ್ ನಾಟೌಟ್: ಮನುಷ್ಯನ ಅತಿಯಾದ ಸ್ವಾರ್ಥಕ್ಕೆ ಕಾಡಿನಲ್ಲಿರುವ ಕಾಡು ಪ್ರಾಣಿಗಳಿಗೆ ಆಹಾರವೇ ಸಿಗದಂತಾಗಿದೆ. ಕಾಡು ಪ್ರಾಣಿಗಳು ಆಗಾಗ್ಗೆ ಆಹಾರ ಅರಸಿಕೊಂಡು ನಾಡಿಗೆ ಬಂದು ಕೃಷಿ ಚಟುವಟಿಕೆಯನ್ನು ನಾಶ ಮಾಡುವುದನ್ನು ಕೇಳಿದ್ದೇವೆ. ಇಂತಹ ಸುದ್ದಿಗಳು ಚಾಲ್ತಿಯಲ್ಲಿರುವಾಗಲೇ ಇಲ್ಲೊಂದು ಕಾಡಾನೆ ಹಸಿವು ತಡೆಯಲಾರದೆ ಅಕ್ಕಿ ಗೋದಾಮಿಗೆ ದಾಳಿ ಮಾಡಿದ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ಎಲ್ಲ ಕಡೆ ವೈರಲ್ ಆಗ್ತಿದೆ.
ಕೇರಳ-ಕರ್ನಾಟಕ ಗಡಿಭಾಗದ ಗುಂಡ್ಲುಪೇಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಇದ್ದಕಿದ್ದಂತೆ ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ.
ಕಾಡಾನೆಯನ್ನು ಕಂಡ ಗ್ರಾಮದ ಜನ ಹೆದರಿದ್ದಾರೆ. ಆನೆಯನ್ನು ಕಾಡಿಗೆ ಓಡಿಸುವ ಯತ್ನ ಮಾಡಿದ್ದಾರೆ. ಆದರೆ ಜನರ ಬೆದರಿಕೆಗೆ ಆನೆ ಜಗ್ಗಲೇ ಇಲ್ಲ. ನೇರವಾಗಿ ಆಹಾರ ನಿಗಮದ ಗೋದಾಮಿನ ಬಳಿ ಬಂದಿದೆ. ಇಲ್ಲಿ ಗೋದಾಮಿಗೆ ಶಟರ್ ಹಾಕಿರುವುದನ್ನು ಕಂಡ ಆನೆ ಸೊಂಡಿಲಿನಿಂದ ಶಟರ್ ಮುರಿದು ಒಳಗಿನಿಂದ ಅಕ್ಕಿಯ ಚೀಲವನ್ನು ಹೊರಗೆ ಎಳೆದು ತಂದು ಅದರಲ್ಲಿದ್ದ ಅಕ್ಕಿಯನ್ನು ತಿನ್ನಲು ಶುರು ಮಾಡಿದೆ. ಗ್ರಾಮಸ್ಥರು ಆನೆಯನ್ನು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆನೆಯ ಹಸಿವನ್ನು ಕಂಡ ಕೆಲವರು ಈ ಬಗ್ಗೆ ಅತಿಯಾದ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹಸಿವು ಅನ್ನುವುದು ಮನುಷ್ಯನಿಗೆ ಆಗಲಿ ಅಥವಾ ಪ್ರಾಣಿಗಳಿಗೇ ಆಗಲಿ ಎಲ್ಲ ಒಂದೇ ಅನ್ನುವುದು ಸಾಬೀತಾಗಿದೆ ಅಂತ ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.