ನ್ಯೂಸ್ ನಾಟೌಟ್: ಲೋಕಸಭಾ ಕ್ಷೇತ್ರದಲ್ಲಿ ಮೇ 7 ರ ಮಂಗಳವಾರ ಮತದಾನ ನಡೆಯುತ್ತಿದೆ. ದಾವಣಗೆರೆ ಬೆಣ್ಣೆ ನಗರಿ ಎಂದು ಹೆಸರು ಪಡೆದಿದೆ. ಬೆಣ್ಣೆ ದೋಸೆಗೆ ಬ್ರಾಂಡ್ ಆಗಿದೆ. ಆದ್ದರಿಂದ ದೋಸೆ ಕಾವಲಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದೆ. ದೋಸೆ ಕಾವಲಿ ಮೇಲೆ ದೋಸೆಯ ಹಿಟ್ಟನ್ನು ಬಳಸಿ ‘ನಮ್ಮ ಮತ, ನನ್ನ ಹಕ್ಕು’ ‘ತಪ್ಪದೇ ಮೇ 7ರಂದು ಮತದಾನ ಮಾಡಿ’ ಎಂಬ ಘೋಷಣೆಯನ್ನು ದೋಸೆಯಲ್ಲಿ ಮೂಡಿಸಿ ದಾವಣಗೆರೆಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸ್ವೀಪ್ ಸಮಿತಿಯಿಂದ ಏರ್ಪಡಿಸಲಾದ ದೋಸೆಯ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ. ವಿ. ‘ನನ್ನ ಮತ, ನನ್ನ ಹಕ್ಕು’ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ. ಇಟ್ನಾಳ್ ‘ಮೈ ವೋಟ್, ಮೈ ವಾಯ್ಸ್ ಮೇ 7’ ಎಂದು ದೋಸೆ ಹಿಟ್ಟಿನಲ್ಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು. ಡಾ. ವೆಂಕಟೇಶ್ ಎಂ. ವಿ. ಮಾತನಾಡಿ, “ಅಕ್ಷರ ದೋಸೋತ್ಸವದ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನವಾಗಬೇಕೆಂಬ ಗುರಿ ನಮ್ಮದಾಗಿದೆ” ಎಂದರು.