ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ರಣತಂತ್ರ ರೂಪಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ತಮಿಳುನಾಡಿನ ಕಡಲೂರು ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರು ಚುನಾವಣೆ ಗೆಲುವಿಗಾಗಿ ಗಿಳಿ ಶಾಸ್ತ್ರದ ಮೊರೆ ಹೋಗಿದ್ದಾರೆ. ಈಗ ಗಿಳಿಯನ್ನು ಇಟ್ಟುಕೊಂಡು ಜನರ ಭವಿಷ್ಯ ತಿಳಿಸುತ್ತಿದ್ದ ಗಿಳಿಯ ಮಾಲೀಕ ಕಂಬಿ ಎಣಿಸುವಂತಾಗಿದೆ.
ಸಿನಿಮಾ ನಿರ್ದೇಶಕರೂ ಆಗಿರುವ ಥಂಕರ್ ಬಚ್ಚನ್ ಅವರು ಬಿಜೆಪಿ ಮಿತ್ರಪಕ್ಷವಾದ ಪಟ್ಟಾಲಿ ಮಕ್ಕಳ್ ಕಚ್ಚಿ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಇತ್ತೀಚೆಗೆ ಅವರು ಚುನಾವಣೆ ಪ್ರಚಾರದ ವೇಳೆ ಸೆಲ್ವರಾಜ್ ಎಂಬ ಗಿಳಿ ಶಾಸ್ತ್ರದವನ ಬಳಿ ತೆರಳಿದ್ದಾರೆ. ಚುನಾವಣೆಯಲ್ಲಿ ನನ್ನ ಅದೃಷ್ಟ ಹೇಗಿದೆ ಹೇಳಿ ಎಂದಿದ್ದಾರೆ. ಆಗ ಗಿಳಿಯ ಮೂಲಕ ಸೆಲ್ವರಾಜ್ ಅವರು ಭವಿಷ್ಯ ನುಡಿದಿದ್ದಾರೆ.
ಗಿಳಿಯು ಥಂಕರ್ ಬಚ್ಚನ್ ಅವರೇ ಗೆಲುವು ಸಾಧಿಸುತ್ತಾರೆ ಎಂಬುದಾಗಿ ಸೂಚಿಸಿದೆ. ಆದರೆ, ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಕಡಲೂರು ಅರಣ್ಯ ಇಲಾಖೆ ಪೊಲೀಸರು ಸೆಲ್ವರಾಜ್ ಅವರನ್ನು ಬಂಧಿಸಿದ್ದಾರೆ. ಗಿಳಿಯನ್ನು ಪಂಜರದಿಂದ ಬಿಟ್ಟಿದ್ದಾರೆ. ಬಳಿಕ ಸೆಲ್ವರಾಜ್ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ತಮಿಳುನಾಡಿನ ರಾಮನಾಥಪುರಂ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪರಿರಾಜನ್ ಎಂಬುವರು ಚುನಾವಣೆ ಪ್ರಚಾರದ ಭಾಗವಾಗಿ ಒಂದು ದಿನದ ಮಟ್ಟಿಗೆ ಕ್ಷೌರಿಕನ ಕೆಲಸ ಮಾಡಿದ್ದಾರೆ. ಜನರಿಗೆ ಕಟಿಂಗ್ ಮಾಡಿ, ಅವರ ಗಡ್ಡ ಬೋಳಿಸಿ, ಅವರು ಸಲೂನ್ ನಿಂದ ಹೊರಡುವಾಗ ಕೈ ಮುಗಿದು ಮತ ಕೇಳುತ್ತಿದ್ದಾರೆ. ಇದು ಸುತ್ತಮುತ್ತಲಿನ ಭಾಗದ ಜನರ ಗಮನವನ್ನೂ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಚಟುವಟಿಕೆ ಕುರಿತು ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ.