ನ್ಯೂಸ್ ನಾಟೌಟ್: ಗಾಂಜಾ, ಅಫೀಮು , ಕೋಕೇನ್, ಹೆರಾಯಿನ್, ಮರಿಜುವಾನಾ ಸೇರಿದಂತೆ ವಿವಿಧ ರೀತಿಯ ಸಿಂಥೆಟಿಕ್ ಡ್ರಗ್ಸ್ಗಳ ಆರ್ಭಟ ಸದ್ಯ ವಿವಿಧ ದೇಶಗಳಲ್ಲಿ ಜೋರಿದೆ. ಈ ಕರಾಳ ದಂಧೆಯಲ್ಲಿರುವ ಡ್ರಗ್ಸ್ ಮಾಫಿಯಾದವರು, ಡ್ರಗ್ಸ್ ಪೆಡ್ಲರ್ಗಳು ಹೊಸ ಬಗೆಯ ಡ್ರಗ್ಸ್ಗಳ ಪತ್ತೆಗೆ ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ನಲ್ಲಿ (Sierra Leone) ಆ ರಾಷ್ಟ್ರಾಧ್ಯಕ್ಷರು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಇದಕ್ಕೆ ಕಾರಣ ಹೊಸ ಬಗೆಯ ಒಂದು ಅತ್ಯಂತ ಮಾರಕ ಡ್ರಗ್ಸ್. ಹೌದು, ಈ ದೇಶವನ್ನು ‘ಕುಶ್’ ಎನ್ನುವ ಹೊಸ ಬಗೆಯ ಡ್ರಗ್ಸ್ ಕಂಗೆಡಿಸಿದ್ದು ಅಲ್ಲಿನ ಪೊಲೀಸರು ಡ್ರಗ್ಸ್ ಕುಳಗಳ ಮೇಲೆ ಕಣ್ಣಿಟ್ಟಿರುವುದಲ್ಲದೇ ಸ್ಮಶಾನಗಳನ್ನೂ ಕಾಯುತ್ತಿದ್ದಾರೆ. ಸಿಯೇರಾ ಲಿಯೋನ್ನಲ್ಲಿ ಇತ್ತೀಚೆಗೆ ಡ್ರಗ್ಸ್ ದಂಧೆಯ ಮೇಲೆ ಕ್ರಮಗಳನ್ನು ಕೈಗೊಂಡು ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ಪರ್ಯಾಯ ಮಾರ್ಗ ಕಂಡುಕೊಳ್ಳುವ ಸಲುವಾಗಿ ಡ್ರಗ್ಸ್ ತಯಾರಿಸುವವರು, ಪೆಡ್ಲರ್ಗಳು ‘ಕುಶ್ ಡ್ರಗ್ಸ್’ ಮೊರೆ ಹೋಗಿದ್ದಾರೆ.
ಜಾಂಬಿ ಡ್ರಗ್ಸ್ (Zombie) ಎಂದಲೂ ಭಯ ಹುಟ್ಟಿಸುತ್ತಿರುವ ಈ ಡ್ರಗ್ಸ್ ಸಿಯೆರಾ ಲಿಯೋನ್, ಲೈಬಿರಿಯಾ ಹಾಗೂ ಅದರ ಪಕ್ಕದ ಕೆಲ ರಾಷ್ಟ್ರಗಳಲ್ಲಿ ವ್ಯಾಪಕ ಭೀತಿ ಹುಟ್ಟಿಸಿದೆ. ಮಾನವನ ಮೂಳೆಯಿಂದ ಗಂಧಕ ((ಸಲ್ಪರ್) ಸೇರಿದಂತೆ ಕೆಲ ವಸ್ತುಗಳನ್ನು ಬೇರ್ಪಡಿಸಿ ಅದನ್ನು ಮರಿಜುವಾನಾದಂತಹ ಡ್ರಗ್ಸ್ ಗಿಡಮೂಲಿಕೆಗಳಿಗೆ ಬೆರೆಯಿಸಿ ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಾರೆ. ಅದುವೇ ಕುಶ್ ಡ್ರಗ್ಸ್. ಇದಕ್ಕಾಗಿ ಸಿಯೆರಾದ ಡ್ರಗ್ಸ್ ತಯಾರಕರು, ವ್ಯಸನಿಗಳು ಸ್ಮಶಾನಗಳನ್ನು ಎಡತಾಕುತ್ತಿದ್ದಾರೆ. ಸಮಾಧಿಗಳನ್ನು ಅಗೆದು ಮಾನವನ ಮೂಳೆಗಳನ್ನು ಕದ್ದೊಯ್ದು ಅದರಿಂದ ಕುಶ್ ಡ್ರಗ್ಸ್ ತಯಾರಿಸುತ್ತಿದ್ದಾರೆ ಎಂದು ಬಿಬಿಸಿ ಏಪ್ರಿಲ್ 5ರಂದು ವರದಿ ಮಾಡಿದೆ. ‘ಕುಶ್ ಒಮ್ಮೆ ಸೇವಿಸಿದ ವ್ಯಕ್ತಿ ಅದಿಲ್ಲದೇ ಬದುಕಲು ಆಗುವುದಿಲ್ಲ ಎನ್ನುವ ಮಟ್ಟಿಗೆ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾನೆ.
ಕ್ರಮೇಣ ಕೈ ಕಾಲು ದೇಹದ ಭಾಗಗಳಲ್ಲಿ ತೂತು ಬಿದ್ದಿರುವ ಹಾಗೇ ವಿಕಾರವಾಗಿ ಬದಲಾಗುತ್ತಾನೆ. ನಂತರ ಅಂಗಾಂಗಗಳ ವೈಪಲ್ಯದಿಂದ ಸಾವು ಸಂಭವಿಸುತ್ತದೆ’ ಎಂದು ರಾಜಧಾನಿ ಫ್ರಿಟೌನ್ನಲ್ಲಿರುವ ರಾಷ್ಟ್ರದ ಏಕೈಕ ಮಾನಸಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಜುಸು ಮೆಟ್ಟಿಯಾ ಹೇಳಿದ್ದಾರೆ. ಇದು ಅಗ್ಗದ ಬೆಲೆಗೆ ಸಿಗುತ್ತಿರುವುದರಿಂದ ವ್ಯಾಪಕವಾಗಿ ಪ್ರಸರಣವಾಗುತ್ತಿದೆ. ಯುವಕ–ಯುವತಿಯರು ಬಲಿಯಾಗುತ್ತಿದ್ದಾರೆ ಎಂದೂ ಹೇಳಿದ್ದಾರೆ. ಹೀಗಾಗಿ ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ ಅಧ್ಯಕ್ಷ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.