ನ್ಯೂಸ್ ನಾಟೌಟ್ : ಲೋಕಸಭಾ ಚುನಾವಣಾ ಕಣ ಮಂಡ್ಯದಲ್ಲಿ ರಂಗೇರಿದೆ. ರಾಜ್ಯದ ಭಾರಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಮಂಡ್ಯವೂ ಒಂದು ಅನ್ನೋದು ವಿಶೇಷ.
ಈ ಹಿಂದೆ ಆ ಕ್ಷೇತ್ರವನ್ನು ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಪ್ರತಿನಿಧಿಸಿದ್ದರು. ಅಂದು ನಟ ದರ್ಶನ್, ಕೆಜಿಎಫ್ ಖ್ಯಾತಿಯ ಯಶ್ ಪ್ರಚಾರ ನಡೆಸಿ ಭರ್ಜರಿ ಗೆಲುವು ಸಾಧಿಸುವಂತೆ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಸುಮಲತಾ ಬಿಜೆಪಿ ಸೇರಿಕೊಂಡಿದ್ದಾರೆ. ಇತ್ತ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ, ಈ ಸಲ ಮಂಡ್ಯದಿಂದ ಕುಮಾರ ಸ್ವಾಮಿ ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಇವರಿಗೆ ಕಾಂಗ್ರೆಸ್ ನಿಂದ ಸ್ಟಾರ್ ಚಂದ್ರು ಬಿಗ್ ಫೈಟ್ ನೀಡಲಿದ್ದಾರೆ. ಈ ನಡುವೆ ದರ್ಶನ್ ಈ ಭಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಇಳಿಯಲಿದ್ದಾರೆ. ಆದರೆ ಸುಮಲತಾ ಬಿಜೆಪಿಯಲ್ಲಿದ್ದರೂ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಸುಮಲತಾ ಅವರ ದತ್ತು ಪುತ್ರ ಎಂದೇ ಗುರುತಿಸಿಕೊಂಡಿರುವ ದರ್ಶನ್ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದರೂ ಸುಮಲತಾ ಮಾತ್ರ ಸೈಲಂಟ್ ಆಗಿರುವುದರ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದೆ.
ದರ್ಶನ್ ಬಂದರೆ ಸ್ಟಾರ್ ಚಂದ್ರುಗೆ ಪ್ಲಸ್ ಆಗಲಿದೆಯೇ ಎಂಬ ಕುತೂಹಲ ಗರಿಗೆದರಿದೆ. ದರ್ಶನ್ ಮಂಡ್ಯ ಗ್ರಾಮಾಂತರ ಭಾಗದಲ್ಲಿ ಸಾಕಷ್ಟು ಹವಾ ಹೊಂದಿದ್ದಾರೆ. 2019ರಲ್ಲಿ ಜೆಡಿಎಸ್ ನಿಂದ ನಿಂತಿದ್ದ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ದರ್ಶನ್ ಅವರ ಬಿರುಗಾಳಿಯಂಥ ಪ್ರಚಾರವೂ ಕಾರಣವಾಗಿತ್ತು. ನಟ ಯಶ್ ಜತೆ ಸೇರಿ ಒಂದು ತಿಂಗಳು ಅವರು ಪ್ರಚಾರ ಮಾಡಿದ್ದರು. ʼಸ್ವಾಭಿಮಾನ ಪಾಲಿಟಿಕ್ಸ್ʼ ಮಾಡಿ ಸುಮಲತಾ ಅವರನ್ನು ಗೆಲ್ಲಿಸಿದ್ದರು.