ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಹದಿಹರೆಯದ ಐದು ಮಂದಿ ವಿದ್ಯಾರ್ಥಿಗಳು ಪ್ರತ್ಯೇಕ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಮತ್ತಿಬ್ಬರು ವಿದ್ಯಾರ್ಥಿನಿಯರು, ಓರ್ವ ಯುವತಿ ದಿಢೀರ್ ಅಸೌಖ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಶಿರ್ತಾಡಿಯ ಹೈಸ್ಕೂಲ್ ವೊಂದರ 10ನೇ ತರಗತಿ ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ (15) ಅಸೌಖ್ಯದಿಂದಏ.14ರಂದು ಮೃತಪಟ್ಟಿದ್ದಾರೆ. ಏ.16ರ ಮುಂಜಾವ ಮೂಲ್ಕಿಯ ಕಾಲೇಜೊಂದರ ವಿದ್ಯಾರ್ಥಿನಿ ಜುನಾ (19) ಹಾಸ್ಟೆಲ್ ನಲ್ಲಿ ಅಸ್ವಸ್ಥಗೊಂಡು ಮೃತಪಟ್ಟರು. ಪಾಂಡೇಶ್ವರದ ಪಿಜಿಯಲ್ಲಿ ಉಳಿದುಕೊಂಡಿದ್ದ ದಂತ ವೈದ್ಯಕೀಯ ಪದವೀಧರೆ ಸ್ವಾತಿ ಶೆಟ್ಟಿ (24) ಏ.15ರಂದು ರಾತ್ರಿ ಮಲಗಿದ್ದವರು ಮರುದಿನ ಬೆಳಗ್ಗೆ ನೋಡುವಾಗ ಮೃತಪಟ್ಟಿದ್ದರು. ಅಲ್ಲದೆ ಏ. 11ರಂದು ಬೆಳ್ಳಾರೆ-ಸವಣೂರು ರಸ್ತೆಯ ಪೆರವಾಜೆ ಬೋರಡ್ಕದ ಬಳಿ ಸ್ಕೂಟಿಗೆ ಕಾಡು ಹಂದಿ ಅಡ್ಡ ಬಂದ ಪರಿಣಾಮ ಎಸ್ಸೆಸೆಲ್ಸಿ ವಿದ್ಯಾರ್ಥಿ ಮಹಮ್ಮದ್ ರಾಝೀಕ್ (16) ಮೃತಪಟ್ಟಿದ್ದರು.
ಏ.15ರಂದು ರಾತ್ರಿ ಮಂಗಳೂರಿನ ಅಡ್ಯಾರ್ ನಲ್ಲಿ ಬೈಕ್ ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವ್ಯೊ ಮಹೇಶ್ (20) ಮೃತಪಟ್ಟಿದ್ದಾರೆ. ಫೆಬ್ರವರಿಯಲ್ಲಿ ನೀರಿನಲ್ಲಿ ಮುಳುಗಿ ಹಳೆಯಂಗಡಿಯ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಮತ್ತೆ ಯುವಕರು ಸಾವಿಗೀಡಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಓರ್ವ ಯುವ ವೈದ್ಯೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಹದಿಹರೆಯದವರು ಮೃತಪಟ್ಟಿರುವ ಘಟನೆ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಇದಕ್ಕೆ ನಿಖರವಾದ ಕಾರಣವನ್ನು ಪತ್ತೆ ಹಚ್ಚುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಣ ಇಲಾಖೆ ದ.ಕ ಜಿಲ್ಲೆ ಹೇಳಿದೆ.