ಸಂದರ್ಶನ: ಹರ್ಷಿತಾ ವಿನಯ್
ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಸೇರಿದಂತೆ ಕೆಲವು ಭಾಗಗಳಲ್ಲಿ ಕೆಪ್ಪಟ್ರಾಯ (ಮಂಗನಬಾವು) ಅತಿ ವೇಗವಾಗಿ ಹರಡುತ್ತಿದೆ. ಈ ಕೆಪ್ಪಟ್ರಾಯ (ಮಂಗನಬಾವು) ಕಾಯಿಲೆಯಿಂದ ಮಹಿಳೆಯರು, ಪುಟ್ಟ ಮಕ್ಕಳು ನಲುಗಿ ಹೋಗಿದ್ದಾರೆ. ಕೆಪ್ಪಟ್ರಾಯ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ನಿಂದ ಅತಿ ವೇಗವಾಗಿ ಹರಡುತ್ತಿದ್ದು ಪೋಷಕರಲ್ಲಿ ಒಂದು ರೀತಿಯಾದಂತಹ ಆತಂಕವನ್ನು ಹುಟ್ಟು ಹಾಕಿದೆ. ಇಂತಹ ಸಂದರ್ಭದಲ್ಲಿ KVG ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯ ಡಾ|ರವಿಶಂಕರ್ (ENT ವಿಭಾಗ ಮುಖ್ಯಸ್ಥರು) ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಸೂಚನೆಗಳನ್ನು ಅತ್ಯಂತ ಜಾಗರೂಕತೆಯಿಂದ ಪಾಲಿಸಿ ನಿಮ್ಮ ಮಕ್ಕಳನ್ನು ಈ ಕಾಯಿಲೆಯಿಂದ ಪಾರು ಮಾಡಬಹುದಾಗಿದೆ.
ಹಳ್ಳಿ ಭಾಷೆಯಲ್ಲಿ ನಾವು ಕೆಪ್ಪಟ್ರಾಯ ಎಂದು ಕರೆಯುತ್ತೇವೆ, ಇದನ್ನು ಮಂಗನ ಬಾವು ಅಂತಾನೂ ಕರೀತಾರೆ..ಹಾಗಾದರೆ ಈ ಕೆಪ್ಪಟ್ರಾಯ ಅಂದರೆ ಏನು? ಅದು ಹರಡೋದು ಹೇಗೆ..? ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವೇ..?
“ಲಾಲಾರಸ ಉತ್ಪಾದನೆ ಮಾಡುವ ಪೆರೊಟಿಡ್ ಗ್ರಂಥಿಗಳ ಊತ ಅಥವಾ ಸೋಂಕು ಇದಾಗಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಶಾಲಾಮಕ್ಕಳಲ್ಲಿ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ. ಆದರೆ ವಯಸ್ಕರಲ್ಲಿ ಬ್ಯಾಕ್ಟೀರಿಯಾದಿಂದಾಗಿ ಮಾತ್ರ ಕಂಡು ಬರುತ್ತದೆ. ವಯಸ್ಕರಲ್ಲಿ ಈ ರೋಗ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ.”
ಈ ಕೆಪ್ಪಟ್ರಾಯ ಎಷ್ಟು ಅಪಾಯಕಾರಿ..?
“ಕೆಪ್ಪಟ್ರಾಯ ಅನ್ನುವ ರೋಗ ಮೇಲ್ನೋಟಕ್ಕೆ ಅಪಾಯಕಾರಿ ಅಲ್ಲ. ಆದರೆ ಮೈಮರೆತರೆ ಜೀವಕ್ಕೇ ಕುತ್ತಾಗಬಹುದು. ನೋಡಿ ಈ ಕೆಪ್ಪಟ್ರಾಯವನ್ನ ಸರಿಯಾದ ಸಮಯದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ದೇಹದ ವಿವಿಧ ಭಾಗಕ್ಕೆ ಇದು ಹಾನಿ ಮಾಡುವಷ್ಟು ಪ್ರಭಾವವನ್ನು ಹೊಂದಿದೆ.”
ಈ ಕೆಪ್ಪಟ್ರಾಯ ಬೇಸಿಗೆಯಲ್ಲೇ ಹೆಚ್ಚಾಗಿ ಕಂಡು ಬರುವುದೇಕೆ..?
“ನೋಡಿ ಬೇಸಿಗೆಯಲ್ಲಿ ಮಕ್ಕಳ ದೇಹದಲ್ಲಿ ಹೆಚ್ಚಾಗಿ ನಿರ್ಜಲೀಕರಣ (ನೀರಿನ ಅಂಶ ಕಡಿಮೆ ಆಗೋದು) ಉಂಟಾಗುತ್ತದೆ. ಈ ಕಾರಣದಿಂದ ಕೆಪ್ಪಟ್ರಾಯ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಉಳಿದಂತೆ ಬಾಯಿ ಸ್ವಚ್ಛತೆಯನ್ನು ಸರಿಯಾಗಿ ಮಾಡದಿದ್ದರೂ ಕೆಪ್ಪಟ್ರಾಯ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಸಲ ಆಸ್ಪತ್ರೆಯಲ್ಲಿ ಹೆಚ್ಚು ದಿನ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲೂ ಮಂಗನಬಾವು ಕಾಣಿಸಿಕೊಳ್ಳುತ್ತದೆ.”
ಕೆಪ್ಪಟ್ರಾಯ ರೋಗದ ಗುಣ ಲಕ್ಷಣಗಳೇನು..?
“ಕೆಪ್ಪಟ್ರಾಯ ಮೊದಲ ಹಂತದಲ್ಲಿ ಜ್ವರ ಬರುತ್ತದೆ. ನಂತರ ಕಿವಿಯ ಕೆಳಗಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ರೋಗ ಉಲ್ಬಣಗೊಂಡ ಸಂದರ್ಭದಲ್ಲಿ ಕೀವು ತುಂಬಿಕೊಳ್ಳುತ್ತದೆ. ಒಂದು ರೀತಿಯಲ್ಲಿ ಮಂಗನ ಮುಖದಂತೆ ಊದಿಕೊಳ್ಳುತ್ತದೆ.”
ಹೆತ್ತವರು ತಮ್ಮ ಮಕ್ಕಳನ್ನು ಈ ಕಾಯಿಲೆಯಿಂದ ರಕ್ಷಿಸೋಕೆ ಏನು ಮಾಡಬೇಕು..? ಈ ರೋಗ ಬಂದ ನಂತರ ಚಿಕಿತ್ಸೆಯ ಮಾರ್ಗೋಪಾಯಗಳೇನು..?
“ಮಕ್ಕಳಲ್ಲಿ ಮಂಗನಬಾವು ಕಾಣಿಸಿಕೊಂಡ ಸಂರ್ಭದಲ್ಲಿ ಅತೀ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದಿಲ್ಲ. ಏಕೆಂದರೆ ಅದು ವೈರಸ್ ನಿಂದ ಹರಡುವ ರೋಗವಾದ್ದರಿಂದ ಒಂದು ವಾರದಲ್ಲಿ ಖಂಡಿತವಾಗಿಯೂ ಗುಣಮುಖವಾಗುತ್ತೆ. ಜ್ವರಕ್ಕೆ ಹಾಗೂ ನೋವಿಗೆ ಔಷಧಿ ತೆಗೆದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಮುಖ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಆದಷ್ಟು ಮಕ್ಕಳನ್ನು isolate ಮಾಡುವುದರಿಂದ ಮನೆಯಲ್ಲಿರುವ ಇತರೆ ಮಕ್ಕಳಿಗೆ ಹರಡದಂತೆ ನೋಡಿಕೊಳ್ಳಬಹುದು. ಮುಖ್ಯವಾಗಿ ಮಗು ಹುಟ್ಟಿದ ಒಂಭತ್ತು ತಿಂಗಳಲ್ಲಿ ನೀಡುವ MMR (mumps, Measles and rubella) ಲಸಿಕೆಯನ್ನು ತಪ್ಪದೆ ನೀಡಬೇಕು. ಈ ಲಸಿಕೆ ನೀಡುವುದರಿಂದ ಆದಷ್ಟು ಇಂತಹ ಸೋಂಕಿನಿಂದ ಮಕ್ಕಳನ್ನು ರಕ್ಷಿಸಬಹುದು. ರೋಗ ಲಕ್ಷಣ ಕಾಣಿಸಿಕೊಂಡ ಸಂದರ್ಭದಲ್ಲಿ ಅತೀ ಹೆಚ್ಚು ದ್ರವ ಆಹಾರ ಸೇವಿಸಬೇಕು. ಹೆಚ್ಚು ನೀರು ಕುಡಿಯಬೇಕು. ದೊಡ್ಡವರಲ್ಲಿ ಕಾಣಿಸಿಕೊಂಡಾಗ ಸೂಕ್ತ ಚಿಕಿತ್ಸೆ ಅಗತ್ಯ ಅ್ಯಂಟಿ ಬಯೋಟಿಕ್ ತೆಗೆದುಕೊಳ್ಳಬೇಕು. ದೊಡ್ಡವರಿಗೆ ಇದು ಹೆಚ್ಚಿನ ಅಪಾಯಕಾರಿ.”
ಕೆಪ್ಪಟ್ರಾಯ ದೇಹಕ್ಕೆ ಶಾಶ್ವತ ಸಮಸ್ಯೆಯನ್ನು ತಂದೊಡ್ಡಬಹುದೇ..? ಇದರಿಂದ ಏನಾದರೂ ಪ್ರಾಣಕ್ಕೆ ಅಪಾಯ ಆಗುತ್ತಾ..?
- ಮಂಗನಬಾವು ಖಾಯಿಲೆಯನ್ನು ನಿರ್ಲ್ಯಕ್ಷಿಸಲೇಬಾರದು. ಕೆಲವು ಬಾರಿ ಇದರಿಂದಾಗಿ ದೊಡ್ಡ ಅಪಾಯ ಸಂಭವಿಸಬಹುದು. ಜೀವನವೇ ಅಂತ್ಯವಾಗುವಂತಹ ಶಾಶ್ವತ ಕಾಯಿಲೆ ಬರಬಹುದು. ಅವುಗಳಲ್ಲಿ ಮುಖ್ಯವಾಗಿ ನೋಡುವುದಾದರೆ….
- ನರಗಳ ಮೇಲೆ ಪರಿಣಾಮದಿಂದಾಗಿ ಕಿವುಡುತನ ಉಂಟಾಗಬಹುದು.
- ಪ್ಯಾಂಕ್ರಿಯಾಟೈಟಿಸ್ ಎಂದರೆ ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ವಾಕರಿಕೆ ಮತ್ತು ವಾಂತಿಯನ್ನ ಒಳಗೊಂಡಿವೆ. ಇದು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಾಗಲ್ಲ.
- ಮೆದುಳು ಜ್ವರ ಬರಬಹುದು. ನಂತರದಲ್ಲಿ ಜೀವನಪರ್ಯಂತ ಹಲವಾರು ತೊಂದರೆಗಳನ್ನು ಉಂಟುಮಾಡಬಹುದು.
- ಮುಖ್ಯವಾಗಿ ಗಂಡಸರಲ್ಲಿ ಟೆಸ್ಟೀಸ್ ಇನ್ಫೆಕ್ಷನ್ (testies infection) ಆಗಬಹುದು. ಇಂತಹ ಸಂದರ್ಭದಲ್ಲಿ ಮುಂದೆ ಸಂತಾನೋತ್ಪತ್ತಿಗೆ ತೊಂದರೆ ಉಂಟಾಗಿ ಮಕ್ಕಳಾಗದೆ ಇರಬಹುದು.
ಒಟ್ಟಿನಲ್ಲಿ ಈ ಕಾಯಿಲೆ ಬಂದವರು ಆತಂಕಕ್ಕೆ ಒಳಪಡಬೇಕಿಲ್ಲ. ನಿಮ್ಮ ಸಮೀಪದ ತಜ್ಞ ವೈದ್ಯರನ್ನು ಸಮಯಕ್ಕೆ ಸರಿಯಾಗಿ ಭೇಟಿ ಮಾಡಿ ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಳ್ಳಿ.