ನ್ಯೂಸ್ ನಾಟೌಟ್ : ಚರ್ಚ್ ಒಂದರಲ್ಲಿ ಧರ್ಮೋಪದೇಶ ಸಮಾರಂಭ ನಡೆಯುತ್ತಿದ್ದಾಗ ಉಪದೇಶ ಮಾಡುತ್ತಿದ್ದ ಬಿಷಪ್ ಮೇಲೆ ಏಕಾಏಕಿ ಕಿಡಿಗೇಡಿಗಳು ಚೂರಿಯಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಹಲವರಿಗೆ ಕಿಡಿಗೇಡಿಗಳು ಇರಿದಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳ ವರದಿ ತಿಳಿಸಿದೆ. ಸೋಮವಾರ ರಾತ್ರಿ ಈ ಘಟನೆ ಸಿಡ್ನಿಯಲ್ಲಿ ನಡೆದಿದೆ. ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಬಗ್ಗೆ ವರದಿಯಾಗಿಲ್ಲ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೇಕ್ಲಿಯಲ್ಲಿರುವ ಕ್ರೈಸ್ಟ್ ದಿ ಗುಡ್ ಶೆಫರ್ಡ್ ಚರ್ಚ್ನಲ್ಲಿ ಬಿಷಪ್ ಲೈವ್ ನಲ್ಲಿ ಧರ್ಮೋಪದೇಶ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ. ಬಿಷಪ್ ಆರೋಗ್ಯ ಸ್ಥಿತಿ ಗಂಭೀರವಿದ್ದು, ಗಾಯಗೊಂಡವರಲ್ಲಿ 60, 50, 30 ಮತ್ತು 20 ವರ್ಷ ವಯಸ್ಸಿನ ನಾಲ್ವರು ಪುರುಷರಾಗಿದ್ದು, ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸಿಡ್ನಿಯ ವೆಸ್ಟ್ಫೀಲ್ಡ್ ಬೋಂಡಿ ಜಂಕ್ಷನ್ ಶಾಪಿಂಗ್ ಸೆಂಟರ್ನಲ್ಲಿ ಆರು ಮಂದಿಯನ್ನು ಇರಿದು ಕೊಂದ ಮೂರು ದಿನಗಳ ಅಂತರದಲ್ಲಿ ಈ ಘಟನೆ ನಡೆದಿದೆ.