ನ್ಯೂಸ್ ನಾಟೌಟ್: ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದ ಆಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಹೀಗಾಗಿ ಗಡಿ ಭಾಗವಾದ ತಲಪಾಡಿ, ಜಾಲ್ಸೂರು, ಸಾರಡ್ಕ ಗಡಿಯಲ್ಲಿ ವಿಶೇಷ ಚೆಕ್ಪೋಸ್ಟ್ ನಿರ್ಮಿಸಲು ತೀರ್ಮಾನಿಸಲಾಗಿದೆ.
ಅದರಂತೆ ಸೋಮವಾರದಿಂದಲೇ ಇವು ಕಾರ್ಯಾಚರಣೆ ಆರಂಭಿಸಲಿವೆ. ಕೋಳಿಗಳನ್ನು ಹೊತ್ತ ಕೆಲವು ವಾಹನಗಳು ಜಿಲ್ಲೆಯಿಂದ ಕೇರಳಕ್ಕೆ ಹೋಗುತ್ತವೆ. ಮರಳಿ ಬರುವ ವೇಳೆ ಆ ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲು ತೀರ್ಮಾನಿಸಲಾಗಿದೆ. ಕೇರಳದ ಆಲಪ್ಪುಳ ಮಂಗಳೂರಿನಿಂದ ಸುಮಾರು 400 ಕಿ.ಮೀ. ದೂರದಲ್ಲಿದೆ. ಆ ಭಾಗದಲ್ಲಿ ಸದ್ಯ ಎರಡನೇ ಬಾರಿ ಹಕ್ಕಿ ಜ್ವರ ಕಂಡುಬರುತ್ತಿದೆ. ಇದರಿಂದ ಸ್ವಲ್ಪ ಆತಂಕವಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಹೀಗಿದ್ದರೂ ಜಿಲ್ಲೆಯ ಮೂರು ಗಡಿ ಭಾಗಗಳಲ್ಲಿ ಚೆಕ್ಪೋಸ್ಟ್ ನಿರ್ಮಾಣ ಮಾಡುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮ ಹೇಗೆ..? ಸಾಮಾನ್ಯವಾಗಿ ಹಕ್ಕಿ ಜ್ವರವು ವಲಸೆ ಹಕ್ಕಿಗಳ ಮೂಲಕ ಒಂದು ಊರಿನಿಂದ ಮತ್ತೂಂದು ಊರಿಗೆ ಹರಡುತ್ತದೆ. ಈಗ ಬೇಸಿಗೆ ಸಮಯವಾಗಿರುವುದರಿಂದ ಹಕ್ಕಿಗಳು ಒಂದು ಕಡೆಯಿಂದ ಮತ್ತೂಂದು ಕಡೆಗೆ ವಲಸೆ ಹೋಗುವುದಿಲ್ಲ. ಕೋಳಿ ಫಾರ್ಮ್ ಗಳಲ್ಲಿ ಕೆಲಸ ಮಾಡುವವರು, ಮಾಂಸ ಸಂಸ್ಕರಣ ಘಟಕಗಳಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸಬೇಕು. ಇದು ಮನುಷ್ಯರಲ್ಲಿ ಪರಸ್ಪರ ಹರಡುವುದಿಲ್ಲ. ಈ ರೋಗಕ್ಕೆ ಕಾರಣವಾಗುವ ವೈರಸ್ ಕೋಳಿಯಿಂದ ಕೋಳಿಗೆ ಮತ್ತು ಕೋಳಿಯಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ.