ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ವಾಲ್ನೂರು ಗ್ರಾಮದ ಸಮೀಪ ಗುರುವಾರ(ಎ.೧೮) ರಾತ್ರಿ ಕಾರು ಡಿಕ್ಕಿ ಹೊಡೆದು ಬಿಜೆಪಿ ಕಾರ್ಯಕರ್ತ ರಾಮಪ್ಪ (60) ಎಂಬುವವರು ಮೃತಪಟ್ಟ ಘಟನೆ ನಡೆದಿದೆ. ಶುಕ್ರವಾರ ಸಿದ್ದಾಪುರ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಜರಂಗದಳದ ಕಾರ್ಯಕರ್ತರು ಗ್ರಾಮಕ್ಕೆ ಬಂದು ಘಟನೆಯನ್ನು ಖಂಡಿಸಿದರು.
ಕೆಲವು ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಸವಾರರು ಪರದಾಡಿದ ಘಟನೆ ನಡೆಯಿತು. ಪರಿಸ್ಥಿತಿಯನ್ನು ಗಮನಿಸಿದ ಜಿಲ್ಲಾಡಳಿತ ತಕ್ಷಣವೇ ಸಿದ್ದಾಪುರ, ವಾಲ್ನೂರು, ಅರೆಕಾಡು, ನೆಲ್ಲಿಹುದಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಸ್ಥಳಕ್ಕೆ ಬಂದ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಶಾಸಕ ಡಾ.ಮಂತರ್ಗೌಡ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಒಪ್ಪದ ಕಾರ್ಯಕರ್ತರು, ‘ಮೃತ ರಾಮಪ್ಪ ಕುಟುಂಬದವರಿಗೆ ₹ 25 ಲಕ್ಷ ಪರಿಹಾರ ನೀಡಬೇಕು, ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸಬೇಕು’ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಸಿ.ಟಿ.ರವಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಪಕ್ಷದಿಂದ ಪರಿಹಾರ ದೊರಕಿರುವ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು. ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟರ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿದ್ದರು. ಗುರುವಾರ ರಾತ್ರಿ ಪ್ರಚಾರ ಮುಗಿಸಿ ರಸ್ತೆಬದಿ ನಿಂತಿದ್ದ ಬಿಜೆಪಿ ಕಾರ್ಯಕರ್ತರಿಗೆ ಕಾರು ಡಿಕ್ಕಿ ಹೊಡೆದು, ರಾಮಪ್ಪ ಮೃತಪಟ್ಟಿದ್ದರು. ಚಂದ್ರರಾಜು ಮತ್ತು ರತೀಶ ಎಂಬ ಕಾರ್ಯಕರ್ತರು ಗಾಯಗೊಂಡಿದ್ದರು. ಆರೋಪಿ ಶೌಖತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕಾರಿನಲ್ಲಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.