ನ್ಯೂಸ್ ನಾಟೌಟ್: ರಾಜ್ಯ ಬಿಜೆಪಿ ನಾಯಕರ ಯಾವ ಆದೇಶವನ್ನೂ ಲೆಕ್ಕಿಸದೆ, ಬೇಕಿದ್ದರೆ ಪಕ್ಷದಿಂದ ಉಚ್ಚಾಟಿಸಿ ಎಂದು ಸವಾಲು ಹಾಕಿರುವ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವುದನ್ನು ಮುಂದುವರಿಸಿದ್ದಾರೆ. ಭಾನುವಾರ (ಏಪ್ರಿಲ್ 14) ಸೋಮಶೇಖರ್ ಭರ್ಜರಿ ಪ್ರಚಾರವನ್ನು ನಡೆಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊಫೆಸರ್ ಎಂ.ವಿ ರಾಜೀವ್ ಗೌಡ ಮತ್ತು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಜಂಟಿಯಾಗಿ ಪ್ರಚಾರ ನಡೆಸಿದರು. ಬಿಜೆಪಿ ಶಾಸಕ ಸೋಮಶೇಖರ್ ಭಾವಚಿತ್ರವನ್ನೂ ಕಾಂಗ್ರೆಸ್ ಪ್ರಚಾರ ವೇದಿಕೆಯಲ್ಲಿ ಹಾಕಲಾಗಿತ್ತು. ಬಿಜೆಪಿ ಅಭ್ಯರ್ಥಿ (ಶೋಭಾ ಕರಂದ್ಲಾಜೆ) ಭಾಷಣಕ್ಕೂ ನಮ್ಮ ಪ್ರೊಫೆಸರ್ ಅವರ ಭಾಷಣವನ್ನು ತುಲನೆ ಮಾಡಿ ನೋಡಿ. ಅವರ ಭಾಷಣ ಬರೀ ಪ್ರಚೋದನೆ ಮಾಡುವಂತದ್ದು, ಜನರ ಭಾವನೆಯನ್ನು ಕೆಣಕುವಂತದ್ದು ಎಂದು ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಮಶೇಖರ್ ಲೇವಡಿ ಮಾಡಿದ್ದಾರೆ.
ದಕ್ಷಿಣ ಕನ್ನಡದ ಪುತ್ತೂರಿನಿಂದ ಬಂದು ಇಲ್ಲಿ ಸಂಸದರಾದವರು ಬೆಂಗಳೂರಿನ ಒಂದೇ ಒಂದು ರಸ್ತೆಯನ್ನು ಸರಿ ಮಾಡಲಿಲ್ಲ. ಬೆಂಗಳೂರಿನಿಂದ ಸಾತನೂರು ಕನಕಪುರಕ್ಕೆ ನಾಲ್ಕು ಪಥದ ರಸ್ತೆಯನ್ನು ಮಾಡಿದ್ದು ಡಿ.ಕೆ.ಸುರೇಶ್ ಅವರು ಎಂದು ಸೋಮಶೇಖರ್ ಈ ಸಂದರ್ಭದಲ್ಲಿ ಪರೋಕ್ಷವಾಗಿ ಹಾಲೀ ಸಂಸದ ಡಿ.ವಿ.ಸದಾನಂದ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.