ನ್ಯೂಸ್ ನಾಟೌಟ್: ವಸತಿ ಸಂಕೀರ್ಣ ಕಟ್ಟಡದ ನಾಲ್ಕನೇ ಅಂತಸ್ತಿನಿಂದ ಬಿದ್ದು ಎರಡನೇ ಅಂತಸ್ತಿನ ಸನ್-ಶೇಡ್ ಮೇಲೆ ಬಿದ್ದ ಎಂಟು ತಿಂಗಳು ಪ್ರಾಯದ ಮಗುವನ್ನು ರಕ್ಷಿಸಿದ ಘಟನೆ ಇಂದು (ಎ.29) ಚೆನ್ನೈ ನಗರದ ಅವದಿ ಎಂಬ ಪ್ರದೇಶದಲ್ಲಿ ನಡೆದಿದೆ.
ಈ ಕುರಿತಾದ ವೀಡಿಯೋ ವೈರಲ್ ಆಗಿದೆ. ಅದೇ ಕಟ್ಟಡದ ನಿವಾಸಿಯೊಬ್ಬರು ಸೆರೆಹಿಡಿದ ವೀಡಿಯೋದಲ್ಲಿ ಮಗು ಹರಿನ್ ಮಗಿ ಎರಡನೇ ಅಂತಸ್ತಿನ ಸನ್ ಶೇಡ್ ಛಾವಣಿಯ ತುದಿಯಲ್ಲಿ ಕುಳಿತಿರುವುದು ಕಾಣಿಸುತ್ತದೆ. ನಿವಾಸಿಗಳು ಭಯಭೀತರಾಗಿ ಚೀರಾಡುತ್ತಿದ್ದಂತೆಯೇ ಮೂವರು ವ್ಯಕ್ತಿಗಳು ಮೊದಲ ಮಹಡಿಯ ಕಿಟಿಕಿಯಿಂದ ಮಗುವನ್ನು ರಕ್ಷಿಸಲು ಯತ್ನಿಸುತ್ತಿರುವುದು ಹಾಗೂ ಇನ್ನೂ ಕೆಲ ಜನರು ಕೆಳಗೆ ಬೆಡ್ ಶೀಟ್ ಅನ್ನು ಹರಡಿ ಹಿಡಿದುಕೊಂಡಿರುವುದು ಕಾಣಿಸುತ್ತದೆ.
ಅಂತಿಮವಾಗಿ ಮೊದಲ ಮಹಡಿಯ ಕಿಟಿಕಿಯಿಂದ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಮೂವರಲ್ಲಿ ಒಬ್ಬ ಮಗುವನ್ನು ಹಿಡಿದು ತಕ್ಷಣ ಇನ್ನೊಬ್ಬನಿಗೆ ಮಗುವನ್ನು ಹಸ್ತಾಂತರಿಸಿದಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಅವದಿ ಪ್ರದೇಶದ ವಿಜಿಎನ್ ಸ್ಟಾಫೊರ್ಡ್ ಸಂಕೀರ್ಣದಲ್ಲಿ ಘಟನೆ ಸಂಭವಿಸಿದ್ದು ಮಗುವಿಗೆ ಬಾಲ್ಕನಿಯಲ್ಲಿ ಕುಳಿತು ಹಾಲುಣಿಸುತ್ತಿದ್ದಾಗ ಮಗು ಜಾರಿ ಬಿದ್ದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಇಲ್ಲಿಯ ತನಕ ಯಾರೂ ದೂರು ದಾಖಲಿಸಿಲ್ಲ ಎನ್ನಲಾಗಿದೆ.